ನವದೆಹಲಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಪ್ರಮುಖ ರಾಜ್ಯಗಳ ಚುನಾವಣೆಗೆ ಪ್ರಚಾರವನ್ನು ಚುರುಕುಗೊಳಿಸಿರುವ ಬಿಜೆಪಿ, ರಾಜಸ್ಥಾನ ಉಸ್ತುವಾರಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರನ್ನು ಮತ್ತು ಮಧ್ಯ ಪ್ರದೇಶ ಉಸ್ತುವಾರಿಯಾಗಿ ಭೂಪೇಂದರ್ ಯಾದವ್ ಅವರನ್ನು ಶುಕ್ರವಾರ ನೇಮಕ ಮಾಡಿದೆ.
ತೆಲಂಗಾಣ ಮತ್ತು ಛತ್ತೀಸ್‌ಗಢಕ್ಕೆ ಕ್ರಮವಾಗಿ ಕೇಂದ್ರ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಓಂ ಪ್ರಕಾಶ್ ಮಾಥೂರ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಹರಿಯಾಣ ನಾಯಕ ಕುಲದೀಪ್ ಬಿಷ್ಣೋಯ್ ಅವರನ್ನು ರಾಜಸ್ಥಾನ ಚುನಾವಣೆಗೆ ಸಹ ಉಸ್ತುವಾರಿಗಳನ್ನಾಗಿ ಮತ್ತು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಛತ್ತೀಸ್‌ಗಢದ ಸಹ ಉಸ್ತುವಾರಿಯಾಗಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಧ್ಯ ಪ್ರದೇಶದ ಸಹ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಅವರನ್ನು ತೆಲಂಗಾಣದ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.