ಮುಂಬೈ: ಮಹಾರಾಷ್ಟ್ರ ಸರ್ಕಾರವು 259 ಹೆಕ್ಟೇರ್- ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಅದಾನಿ ಗ್ರೂಪ್ ಸಂಸ್ಥೆಗೆ ವಹಿಸಲು ಔಪಚಾರಿಕವಾಗಿ ಸಮ್ಮತಿ ಸೂಚಿಸಿದ ಬೆನ್ನಲ್ಲೇ, ಸ್ಥಳೀಯ ವ್ಯವಹಾರಗಳನ್ನು ಅವಲಂಬಿಸಿರುವ ಇಲ್ಲಿನ ಬಡ ಜನರು ಈ ಯೋಜನೆಯಿಂದ ತೊಂದರೆ ಎದುರಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಏಷ್ಯಾದ ದೊಡ್ಡ ಕೊಳೆಗೇರಿಯಾಗಿರುವ ಧಾರಾವಿಯಲ್ಲಿ ಗುಡಿಸಲು, ಸಣ್ಣ ಮನೆಗಳು ಮತ್ತು ಜೋಪಡಿಗಳೇ ಇದ್ದು, ಸಣ್ಣ ವ್ಯಾಪಾರಿಗಳು ನೆಲೆ ಕಂಡುಕೊಂಡಿದ್ದಾರೆ. ಈ ಯೋಜನೆಯಿಂದಾಗಿ ಇಲ್ಲಿನ ಬಹುತೇಕ ನಿವಾಸಿಗಳಲ್ಲಿ ಭವಿಷ್ಯದ ಜೀವನ ಮತ್ತು ವಸತಿಯ ಬಗ್ಗೆ ಅನಿಶ್ಚಿತತೆ ಮೂಡಿದೆ.
'ಈ ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡಲು ಸರ್ಕಾರ ಹಸಿರು ನಿಶಾನೆ ತೋರಿರುವುದು ನಮಗೆ ಆಘಾತ ತರಿಸಿದೆ. ನೆಲ ಮಹಡಿಯೊಂದಿಗೆ ಎರಡು ಮಹಡಿವರೆಗಿನ ನೂರಾರು ವಸತಿ ಕಟ್ಟಡಗಳೂ ಇಲ್ಲಿವೆ. ಇವುಗಳಲ್ಲಿನ ಮನೆಗಳಲ್ಲಿ ಒಂದು ಕೋಣೆಯಲ್ಲಿ ಮನೆ ಮಾಲೀಕರು ವಾಸವಿದ್ದರೆ, ಮತ್ತೊಂದರಲ್ಲಿ ಬಾಡಿಗೆದಾರರು ಇದ್ದಾರೆ. ಈ ಬಾಡಿಗೆ ಹಣದಿಂದಲೇ ಮನೆ ಮಾಲೀಕರು ತನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ' ಎಂದು ಧಾರಾವಿ ನಾಗರಿಕ ಸೇವಾ ಸಂಘದ ಅಧ್ಯಕ್ಷ ಪೌಲ್ ರಾಫೆಲ್ ಹೇಳಿದರು.
'ಇದೀಗ ಈ ಯೋಜನೆಯ ಭಾಗವಾಗಿ ಈ ಕಟ್ಟಡಗಳನ್ನು ಕೆಡವಿ, ಮಾಲೀಕರಿಗೆ ಕೇವಲ ಒಂದು ಕೋಣೆ ನೀಡಿದರೆ ಏನು ಪ್ರಯೋಜನ' ಎಂದು ಅವರು ಪ್ರಶ್ನಿಸಿದರು.
'ಈ ಯೋಜನೆಯು ವಿಶ್ವದ ಅತಿ ದೊಡ್ಡ ಭೂ ಹಗರಣವಾಗಿದೆ' ಎಂದು ಧಾರಾವಿಯ ನಿವಾಸಿಯೂ ಆಗಿರುವ ವಕೀಲ ಸಂದೀಪ್ ಕಾಟ್ಕೆ ಆರೋಪಿಸಿದರು.
'ಅದಾನಿ ಗ್ರೂಪ್ 10 ಕೋಟಿ ಚದರ ಅಡಿಯ ಅಭಿವೃದ್ಧಿ ಹಕ್ಕುಗಳನ್ನು ₹5,069 ಕೋಟಿಗೆ ಪಡೆಯಲಿದೆ. ಅಲ್ಲದೆ ಸರ್ಕಾರದ ಹಣದ ಜತೆಗೆ ಹೆಚ್ಚುವರಿಯಾಗಿ ರೈಲ್ವೆ ಜಮೀನನ್ನೂ ಪಡೆಯಲಿದೆ' ಎಂದು ಅವರು ಹೇಳಿದರು.
'ಧಾರಾವಿಯನ್ನು ನಿಜವಾಗಿಯೂ ಪುನರಾಭಿವೃದ್ಧಿ ಮಾಡಲು ಸರ್ಕಾರ ಬಯಸಿದ್ದರೆ, ಮೊದಲು ಹೊಸ ಸಮೀಕ್ಷೆ ನಡೆಸಬೇಕು ಮತ್ತು ಸಮೀಕ್ಷೆಯ ಕೊನೆಯ ದಿನಾಂಕವನ್ನು ಅರ್ಹತೆಗೆ ಕಟ್‌ಆಫ್ ದಿನಾಂಕವಾಗಿಸಬೇಕು' ಎಂದು ಅವರು ಒತ್ತಾಯಿಸಿದರು.
'ಪುನರಾಭಿವೃದ್ಧಿ ಹೆಸರಿನಲ್ಲಿ ಯಾವುದೇ ಕುಟುಂಬವನ್ನು ಧಾರಾವಿಯಿಂದ ಹೊರಗೆ ಕಳುಹಿಸಬಾರದು. ಅದಾನಿ ಆರು ಕೋಟಿ ಚದರ ಅಡಿ ವಿಸ್ತೀರ್ಣವನ್ನು ಮಾರಾಟ ಮಾಡಿ, ಅದರಿಂದ ₹ 3 ಲಕ್ಷ ಕೋಟಿ ಗಳಿಸಲಿದ್ದಾರೆ. ಹೀಗಾದರೆ ಧಾರಾವಿ ಯೋಜನೆ ಯಾರಿಗೆ ಅನುಕೂಲವಾಗುತ್ತದೆ? ಸ್ಥಳೀಯ ನಿವಾಸಿಗಳಿಗೊ ಅಥವಾ ಅದಾನಿಗೊ?' ಎಂದು ವಕೀಲರು ಪ್ರಶ್ನಿಸಿದರು.
'ಈ ಪ್ರದೇಶದಲ್ಲಿ ಸಾವಿರಾರು ಗುಡಿಸಲು, ಜೋಪಡಿ, ಮನೆಗಳಿವೆ. ಪ್ರತಿಯೊಂದರಲ್ಲೂ ನಾಲ್ಕರಿಂದ ಐದು ಕುಟುಂಬಗಳು ವಾಸಿಸುತ್ತವೆ. ಪುನರಾಭಿವೃದ್ಧಿ ನಂತರ, ಅವರಿಗೆ ಕೇವಲ ಒಂದು ಫ್ಲಾಟ್ ಮಾತ್ರ ನೀಡಿದರೆ ಹೇಗೆ? ಅವರಿಗೆ ಸಾಕಾಗುವುದಿಲ್ಲ' ಎಂದು ನಿವಾಸಿಯೊಬ್ಬರು ಹೇಳಿದರು.
'ಧಾರಾವಿಯಲ್ಲಿ 2,000ಕ್ಕೂ ಹೆಚ್ಚು ಇಡ್ಲಿ ಮಾರಾಟಗಾರರು ವಾಸಿಸುತ್ತಿದ್ದಾರೆ. ಅವರು ಇಡೀ ನಗರಕ್ಕೆ ಆಹಾರ ಪೂರೈಸುವ ಕಾಯಕದಲ್ಲಿ ತೊಡಗಿದ್ದಾರೆ. ಪುನರಾಭಿವೃದ್ಧಿ ನಂತರ ಈ ರೀತಿಯ ವ್ಯವಹಾರಗಳು ಇಲ್ಲಿ ಅಸ್ತಿತ್ವದಲ್ಲಿ ಇರುವುದಿಲ್ಲ. ಚರ್ಮದ ಉತ್ಪನ್ನಗಳು ಮತ್ತು ಇತರ ಆಭರಣಗಳ ತಯಾರಿಕಾ ಘಟಕಗಳನ್ನು ಮುಚ್ಚಲಾಗುತ್ತದೆ' ಎಂದು ನಿವಾಸಿ ತರುಣ್ ದಾಸ್ ಎಂಬುವರು ಬೇಸರ ವ್ಯಕ್ತಪಡಿಸಿದರು.
'600 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಧಾರಾವಿಯು ಮುಂಬೈನ ಪ್ರಮುಖ ಸ್ಥಳದಲ್ಲಿದೆ. ನಗರದ 4ರಿಂದ 5 ರೈಲ್ವೆ ನಿಲ್ದಾಣಗಳು ಇದಕ್ಕೆ ಸಮೀಪದಲ್ಲಿಯೇ ಇವೆ. ಹೀಗಾಗಿ ಈ ಯೋಜನೆಯು ಜನರ ಕಲ್ಯಾಣಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಬದಲಿಗೆ ಅದಾನಿ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಪ್ರದೇಶಕ್ಕೆ ಬರುತ್ತಿದ್ದಾರೆ. ನಮಗೆ ಈ ಯೋಜನೆ ಬಗ್ಗೆ ಇಲ್ಲಿಯವರೆಗೆ ಸಂಪೂರ್ಣವಾಗಿ ತಿಳಿದಿಲ್ಲ. ಆದರೆ ನಮಗೆ ಇಲ್ಲಿಯೇ ಕೊಠಡಿಗಳು ಬೇಕು' ಎಂದು ದಾಸ್ ಆಗ್ರಹಿಸಿದರು.
'ಧಾರಾವಿಯ ಪುನರಾಭಿವೃದ್ಧಿ ಯೋಜನೆಯನ್ನು 2004ರಲ್ಲಿಯೇ ರೂಪಿಸಿದ್ದರೂ ಇಲ್ಲಿಯವರೆಗೂ ಏನೂ ಆಗಿಲ್ಲ. 1995ರಲ್ಲಿ ಇಲ್ಲಿ 57 ಸಾವಿರ ಗುಡಿಸಲುಗಳಿದ್ದವು. ಆದೀಗ 1.20 ಲಕ್ಷಕ್ಕೆ ಏರಿವೆ. ಇಲ್ಲಿನ ಬಹುತೇಕ ನಿವಾಸಿಗಳು ಸಣ್ಣ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಈ ಯೋಜನೆ ವಿಳಂಬವಾಗದೆ ಸಕಾಲದಲ್ಲಿ ಜಾರಿಯಾಗಬೇಕು' ಎಂದು ಹೆಸರು ಹೇಳಲು ಬಯಸದ ಸಾಮಾಜಿಕ ಹೋರಾಟಗಾರರು ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರವು 259 ಹೆಕ್ಟೇರ್- ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಅದಾನಿ ಸಮೂಹ ಸಂಸ್ಥೆಗೆ ಔಪಚಾರಿಕವಾಗಿ ನೀಡಿದೆ. ವರದಿಯ ಪ್ರಕಾರ, ಈ ಯೋಜನೆಯಿಂದ ₹ 20,000 ಕೋಟಿ ಆದಾಯ ಸಂಗ್ರಹವಾಗಲಿದೆ ಎಂದು ಹೇಳಲಾಗುತ್ತಿದೆ.
ಮೋದಿ ಆಪ್ತರಿಗೆ ಬಿಜೆಪಿ ಸರ್ಕಾರಗಳು ಎಟಿಎಂ: ಕಾಂಗ್ರೆಸ್ ಆರೋಪ
: ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿಯ ರಾಜ್ಯ ಸರ್ಕಾರಗಳು 'ಅವರ ಆಪ್ತರಿಗೆ ಎಟಿಎಂ ಯಂತ್ರಗಳಾಗಿವೆ' ಎಂದು ಆರೋಪಿಸಿದೆ.
ಈ ಯೋಜನೆಯ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ 2022ರ ಡಿಸೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆ ಕುರಿತು ಮಹಾರಾಷ್ಟ್ರದ ವಸತಿ ಅಭಿವೃದ್ದಿ ಇಲಾಖೆಯು ಕೈಗೊಂಡ ನಿರ್ಣಯವನ್ನು ಗುರುವಾರ ಪ್ರಕಟಿಸಿದೆ.
ಈ ಯೋಜನೆಯಲ್ಲಿ ಅದಾನಿ ಪ್ರಾಪರ್ಟಿಸ್ ಪ್ರಮುಖ ಪಾಲುದಾರನಾಗಲಿದೆ. ವಿವಾದದಿಂದಾಗಿ ಮೂಲ ಟೆಂಡರ್ ರದ್ದುಗೊಂಡ ಬಳಿಕ ಶಿಂದೆ- ಫಡಣವೀಸ್ ಸರ್ಕಾರವು ಪ್ರಧಾನಿ ಮೋದಿ ಅವರ ಹತ್ತಿರದ ಸ್ನೇಹಿತನಿಗೆ ಈ ಬಿಡ್ ದೊರೆಯುವಂತೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಟೆಂಡರ್ ಷರತ್ತುಗಳನ್ನು ಬದಲಾಯಿಸಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್ ದೂರಿದರು.