ಗುವಾಹಟಿ: ಹಿಂಸಾಚಾರ, ಸಂಘರ್ಷಪೀಡಿತ ಮಣಿಪುರ ರಾಜ್ಯದ ವಿವಿಧ ಪ್ರದೇಶಗಳಿಗೆ ಶನಿವಾರ ತೆರಳಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ 18 ಸಂಸದರು, ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದು, ವಸ್ತುಸ್ಥಿತಿಯ ವಿವರ ಪಡೆದರು.
'ವಾಸ್ತವಿಕ ಗಡಿ ರೇಖೆ ಪ್ರದೇಶದಲ್ಲಿರುವ ವಾತಾವರಣವೇ ಪ್ರಸ್ತುತ ಮಣಿಪುರದಲ್ಲಿ ಇದೆ' ಎಂದು ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸಂಸದ ಗೌರವ್ ಗೊಗೊಯಿ ಹೇಳಿದರು.
ಸಂಸದರ ನಿಯೋಗವು ಎರಡು ದಿನ ಪ್ರವಾಸ ಹಮ್ಮಿಕೊಂಡಿದೆ. ಮೊದಲ ದಿನವಾದ ಶನಿವಾರ ಕುಕಿ ಸಮುದಾಯದವರು ಹೆಚ್ಚಿರುವ ಚುರಚಾಂದ್‌ಪುರ್ ಮತ್ತು ಮೈತೇಯಿ ವರ್ಗದವರು ಹೆಚ್ಚಿರುವ ಬಿಷ್ಣುಪುರ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಿಗೆ ಭೇಟಿ ನೀಡಿತ್ತು.
ಮಣಿಪುರದಲ್ಲಿ ಮೇ 3ರಂದು ಆರಂಭವಾಗಿರುವ ಜನಾಂಗೀಯ ಸಂಘರ್ಷ, ಹಿಂಸಾಕೃತ್ಯಗಳಲ್ಲಿ ಉಭಯ ಸಮುದಾಯಗಳಿಗೆ ಸೇರಿರುವ ಸುಮಾರು 150 ಜನರು ಮೃತಪಟ್ಟಿದ್ದು, 60 ಸಾವಿರಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ.
ಮೈತೇಯಿ ಸಮುದಾಯದ ವಿವಿಧ ಸಂಘಟನೆಗಳು ಒಟ್ಟಾಗಿ ರಾಜಧಾನಿ ಇಂಫಾಲ್‌ದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರ‍್ಯಾಲಿ ಸಂದರ್ಭದಲ್ಲೇ 'ಇಂಡಿಯಾ'ದ ಸಂಸದರ ಭೇಟಿ ಕಾರ್ಯವೂ ನಡೆಯಿತು.
ವಿವಿಧೆಡೆ ಭೇಟಿಗೆ ತೆರಳುವ ಮುನ್ನ ಮಾತನಾಡಿದ ಗೌರವ್ ಗೊಗೊಯಿ, 'ಮೈತೇಯಿ ಮತ್ತು ಕುಕಿ ಸಮುದಾಯದವರ ಸಂಘರ್ಷದಿಂದಾಗಿ ರಾಜ್ಯದಲ್ಲಿ ವಾಸ್ತವ ಗಡಿ ರೇಖೆಯಲ್ಲಿರುವ ವಾತಾವರಣವೇ ಇದೆ. ಶಾಲೆ, ಕಾಲೇಜಿಗೆ ತೆರಳಬೇಕಿದ್ದ ಯುವಕರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಹಳ್ಳಿಗಳನ್ನು ಕಾಯುತ್ತಿದ್ದಾರೆ. ಉಭಯ ಸಮುದಾಯದವರು ಸೇನೆಯ ಯೋಧರ ಮೇಲೆ ದಾಳಿ ನಡೆಸುತ್ತಿದ್ದಾರೆ' ಎಂದರು.
ಹಿಂಸಾಕೃತ್ಯದ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಮತ್ತೆ ಮಾತನಾಡಿದ ಅವರು, 'ಪ್ರಸ್ತುತ ಸಂತ್ರಸ್ತರು ಮತ್ತೆ ತಮ್ಮ ಮನೆಗಳಿಗೆ ಹೋಗಲೂ ಹಿಂಜರಿಯುವಷ್ಟು ಭೀತರಾಗಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಅವರು ಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ' ಎಂದರು.
'ನಾಗರಿಕರ ಮೇಲೆ ಹೇಗೆ ಮತ್ತು ಯಾರು ದಾಳಿ ಮಾಡಿ ಕೊಂದಿದ್ದಾರೆ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸುವುದು ಅಗತ್ಯ' ಎಂದು ಅವರು ಒತ್ತಾಯಿಸಿದರು.
ಗೊಗೊಯಿ ಅವರಲ್ಲದೇ ಕಾಂಗ್ರೆಸ್‌ನ ಅಧಿರ್ ರಂಜನ್ ಚೌಧುರಿ, ಟಿಎಂಸಿಯ ಸುಶ್ಮಿತಾ ದೇವ್, ಆರ್‌ಜೆಡಿಯ ಮನೋಜ್ ಝಾ, ಎನ್‌ಸಿಪಿಯ ವಂದನಾ ಚವಾಣ್, ಜೆಎಂಎಂನ ಮಹುಅ ಮಾಝಿ, ಸಿಪಿಎಂನ ಎ.ಆರ್.ರಹೀಂ, ಡಿಎಂಕೆಯ ಕನಿಮೋಳಿ, ಜೆಡಿಯುನ ರಾಜೀವ್ ರಂಜನ್ ಲಾಲನ್ ಸಿಂಗ್, ಎಎಪಿಯ ಸುಶೀಲ್ ಗುಪ್ತಾ, ಎಸ್‌ಪಿಯ ಜಾವೇದ್ ಅಲಿ ಖಾನ್ ನಿಯೋಗದಲ್ಲಿ ಇದ್ದರು.
ಮಣಿಪುರ ಹಿಂಸಾಚಾರ ಕುರಿತಂತೆ ವಿರೋಧಪಕ್ಷಗಳು ಈಗಾಗಲೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇದು ಮುಂದಿನ ವಾರ ಚರ್ಚೆಗೆ ಬರುವ ಸಂಭವವಿದೆ.
'ಜನರ ಮಾತುಗಳಿಗೆ ಧ್ವನಿಯಾಗಬೇಕು ಎಂದು ಮಣಿಪುರಕ್ಕೆ ಭೇಟಿ ನೀಡುತ್ತಿದ್ದೇವೆ. ತಪ್ಪಿತಸ್ಥರ ಗುರುತಿಸಿ ಶಿಕ್ಷಿಸುವ, ಸಮುದಾಯಗಳ ಮಧ್ಯೆ ಬಾಂಧವ್ಯವನ್ನು ಮರುನಿರ್ಮಿಸುವ ಕೆಲಸ ಆಗಬೇಕಾಗಿದೆ' ಎಂದು ಆರ್‌ಜೆಡಿಯ ಮನೋಜ್ ಝಾ ಎಂದು ಹೇಳಿದರು.
ಸಂಸದರ ನಿಯೋಗವು ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭಾನುವಾರ ಭೇಟಿಯಾಗಿ, ವಿವಿಧ ಬೇಡಿಕೆ ಕುರಿತು ಮನವಿ ಸಲ್ಲಿಸುವ ಸಾಧ್ಯತೆಗಳಿವೆ.
'ಮೈತೇಯಿ' ಬೇಡಿಕೆ: ಮಣಿಪುರ ಏಕತೆ ಸಂಯೋಜನಾ ಸಮಿತಿ (ಸಿಒಸಿಒಎಂಐ) ನೇತೃತ್ವದಲ್ಲಿ ರ‍್ಯಾಲಿ ನಡೆಸಿದ್ದ ಮೈತೇಯಿ ಸಮುದಾಯದವರು 'ಚಿನ್ ಕುಕಿ ನಾರ್ಕೊ ಭಯೋತ್ಪಾದಕರು' ಮತ್ತು 'ಅಕ್ರಮ ವಲಸಿಗರ' ವಿರುದ್ಧ ಕಠಿಣಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಕುಕಿ ಸಮುದಾಯದವರ ಬೇಡಿಕೆಗೂ ಸಮಿತಿಯು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. 'ಕುಕಿ' ಜನರ ಬೇಡಿಕೆ: ಇನ್ನೊಂದೆಡೆ ಕುಕಿ ಸಮುದಾಯದವರ ಸಂಘಟನೆ ಇಂಡಿಜಿನೀಯಸ್ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್‌ಎಫ್) ಸದಸ್ಯರು ರಾಜ್ಯ ಪ್ರವಾಸ ಕೈಗೊಂಡಿದ್ದ 'ಇಂಡಿಯಾ' ಸಂಸದರ ನಿಯೋಗವನ್ನು ಭೇಟಿಯಾಗಿ ತಮ್ಮ ಬೇಡಿಕೆ ಕುರಿತು ಮನವಿ ಸಲ್ಲಿಸಿದರು. ಮಣಿಪುರದಲ್ಲಿ ಕುಕಿ ಸಮುದಾಯದವರಿಗಾಗಿಯೇ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಐಟಿಎಲ್‌ಎಫ್‌ನ ಪ್ರಮುಖ ಬೇಡಿಕೆಯಾಗಿದೆ.
'ಕುಕಿ' ಜನರ ಬೇಡಿಕೆ: ಕುಕಿ ಸಮುದಾಯ ದವರ ಸಂಘಟನೆ ಇಂಡಿಜಿನೀಯಸ್ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್‌ಎಫ್) ಸದಸ್ಯರು, ರಾಜ್ಯ ಪ್ರವಾಸ ಕೈಗೊಂಡಿದ್ದ 'ಇಂಡಿಯಾ' ಸಂಸದರ ನಿಯೋಗವನ್ನು ಭೇಟಿಯಾಗಿ ತಮ್ಮ ಬೇಡಿಕೆ ಕುರಿತು ಮನವಿ ಸಲ್ಲಿಸಿದರು.
ಮಣಿಪುರದಲ್ಲಿ ಕುಕಿ ಸಮುದಾಯದವರಿಗಾಗಿಯೇ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಐಟಿಎಲ್‌ಎಫ್‌ನ ಪ್ರಮುಖ ಬೇಡಿಕೆಯಾಗಿದೆ.
ಸಂತ್ರಸ್ತೆ ಭೇಟಿಯಾದ ರಾಜ್ಯಪಾಲರು ತಲಾ ₹ 10 ಲಕ್ಷ ಪರಿಹಾರ ವಿತರಣೆ 'ಇಂಡಿಯಾ'ದ 18 ಸಂಸದರ ನಿಯೋಗ ಪ್ರವಾಸದಲ್ಲಿರುವಾಗಲೇ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರು ಬೆತ್ತಲೆ ಮೆರವಣಿಗೆ ಕೃತ್ಯದ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿದರು. ಇಬ್ಬರು ಮಹಿಳೆಯರ ಕುಟುಂಬಗಳಿಗೆ ತಲಾ ₹ 10 ಲಕ್ಷ ಪರಿಹಾರದ ಚೆಕ್ ವಿಸ್ತರಿಸಿದರು. 'ಕೃತ್ಯ ಇಡೀ ದೇಶ ನಾಚಿಕೆ ಪಡುವಂತದ್ದಾಗಿದೆ. ಇಬ್ಬರು ಸಹೋದರಿಯರನ್ನು ನಾನು ಭೇಟಿಯಾಗಿದ್ದೇನೆ. ಅವರಿಗೆ ಅಗತ್ಯ ಹಣಕಾಸು ನೆರವು ಮತ್ತು ಮಾನಸಿಕ ಸ್ಥೈರ್ಯ ನೀಡಲಾಗುವುದು. ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಶಾಂತಿ ಮರುಸ್ಥಾಪನೆಗೆ ಎಲ್ಲರೂ ಅಗತ್ಯ ಸಹಕಾರ ನೀಡಬೇಕು' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆತ್ತಲೆ ಮೆರವಣಿಗೆ: ತನಿಖೆ ಶುರು
ಮಣಿಪುರದಲ್ಲಿ ಮೇ 4ರಂದು ನಡೆದಿದ್ದ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬೆತ್ತಲೆ ಮೆರವಣಿಗೆ ಕೃತ್ಯದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಈ ಸಂಬಂಧ ವಿಡಿಯೊ ಜುಲೈ 19ರಂದು ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿತ್ತು.
ನಿರ್ದಿಷ್ಟ ಸಮುದಾಯದ ಜನರು, ಮತ್ತೊಂದು ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದ ಈ ವಿಡಿಯೊ ಬಹಿರಂಗವಾದ ಹಿಂದೆಯೇ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.