ಮುಂಬೈ: 2019ರ ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಸಮಯ. 'ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರುವೆ' ಎಂದು ದೇವೇಂದ್ರ ಫಡಣವೀಸ್ ಘೋಷಿಸಿದ್ದರು.
ಚುನಾವಣಾ ಪ್ರಚಾರದ ವೇಳೆ ಅವರ ಈ ಮಾತು ಹೆಚ್ಚು ಪ್ರಚಲಿತವಾಗಿತ್ತು. ಆದರೆ, ಶಿವಸೇನೆ ಇದನ್ನು ಅಪಹಾಸ್ಯ ಮಾಡಿತ್ತು.
ಫಡಣವೀಸ್ ಮಾತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್, ಜೋಕುಗಳು ಹುಟ್ಟಿಕೊಂಡಿದ್ದವು. ಚುನಾವಣೆ ಮುಗಿದ ಬಳಿಕ ಎನ್‌ಸಿಪಿ ನಾಯಕ ಅಜಿತ್ ಪವಾರ್ ಜೊತೆಗೆ ಸರ್ಕಾರ ರಚಿಸಿ ಮುಖ್ಯಮಂತ್ರಿ ಹುದ್ದೆಗೇರಿದರು. ಸರ್ಕಾರದ ಭಾಗವಾದ ಅಜಿತ್ ಡಿಸಿಎಂ ಪಟ್ಟಕ್ಕೇರಿದರು. ಆದರೆ, ಫಡಣವೀಸ್ ಸರ್ಕಾರ 80 ಗಂಟೆ ಕಾಲವಷ್ಟೇ ಹೋರಾಡಿ ತನ್ನ ಉಸಿರಾಟ ನಿಲ್ಲಿಸಿತ್ತು.
ಕಾಂಗ್ರೆಸ್‌ನ ಸಹಕಾರದಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ 'ಮಹಾ ವಿಕಾಸ ಆಘಾಡಿ' ಹೆಸರಿನಡಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಹುದ್ದೆಯನ್ನು ಕಿತ್ತುಕೊಂಡಾಗ ಫಡಣವೀಸ್ ಅಕ್ಷರಶಃ ಅಸಹಾಯಕರಾಗಿದ್ದರು.
2022ರ ಮೇ 1ರಂದು ಬ್ಯಾಂಕ್ ಉದ್ಯೋಗಿಯಾದ ತನ್ನ ಪತ್ನಿ ಅಮೃತಾ ಅವರ ಜೊತೆಗೆ ಟಿ.ವಿ ಶೋವೊಂದರಲ್ಲಿ ಫಡಣವೀಸ್ ಕಾಣಿಸಿಕೊಂಡಾಗ 'ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರುವೆ' ಎಂದು ಗುಡುಗಿದ್ದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಈಗ ಉಪ ಮುಖ್ಯಮಂತ್ರಿಯಾಗಿ ಫಡಣವೀಸ್ ಮತ್ತೆ ಮರಳಿದ್ದಾರೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರದ ತೆಕ್ಕೆಗೆ ಸೇರಿರುವ ಹಿಂದೆ ಫಡಣವೀಸ್ ಅವರ ಚಾಣಾಕ್ಷತನವೂ ಕೆಲಸ ಮಾಡಿದೆ ಎಂಬುದು ರಾಜಕೀಯ ವಲಯದಲ್ಲಿನ ಸದ್ಯದ ಬಹುಚರ್ಚಿತ ವಿಷಯ. ಈ ರಾಜಕೀಯ ಚದುರಂಗ ಮೇಲಾಟದ ಹಿಂದಿರುವ 'ಚಾಣಕ್ಯ' ಅವರೇ ಎನ್ನುವುದು ಸರ್ವವಿದಿತ.
ರಾಜಕೀಯವಾಗಿ 'ಕ್ಲೀನ್ ಇಮೇಜ್' ವ್ಯಕ್ತಿತ್ವ ಹೊಂದಿರುವ ಅವರು ಮಹಾರಾಷ್ಟ್ರದ ಘಟನಾನುಘಟಿ ರಾಜಕಾರಣಿಗಳ ನಡುವೆ 'ಸಾಮಾನ್ಯ ವ್ಯಕ್ತಿ'ಯಾಗಿಯೇ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.
ಮೃದುಭಾಷಿಯಾದ ಅವರು ಆರೆಸ್ಸೆಸ್ ಗರಡಿಯಲ್ಲಿ ಪಳಗಿದ್ದಾರೆ. ನಾಗಪುರ ಮೂಲದ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.