ಮಂಜೇಶ್ವರ: ಕೇರಳ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ತರಬೇತಿ ಕೇಂದ್ರ ವರ್ಕಾಡಿಯಲ್ಲಿ ಅಂತರರಾಷ್ಟ್ರೀಯ ಕಿರುಧಾನ್ಯಗಳ ವರ್ಷದ ನಿಮಿತ್ತ ಸಣ್ಣ ಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಜಿಲ್ಲಾಧಿಕಾರಿ ಇನ್ಬ ಶೇಖರ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿದ ಅವರು, ರಾಗಿ ಬೆಳೆಗೆ ಇತರೆ ಬೆಳೆಗಳಿಗಿಂತ ಕಡಿಮೆ ನೀರಿನ ಅವಶ್ಯಕತೆ ಇದ್ದು, ಜಿಲ್ಲೆಯಲ್ಲಿ ಗದ್ದೆಗೆ ಯೋಗ್ಯವಾಗಿದೆ ಎಂದು ತಿಳಿಸಿದರು. ರಾಗಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ಜಿಲ್ಲೆಯ ಆಹಾರ ವೈವಿಧ್ಯ ಮತ್ತು ಕೃಷಿ ವೈವಿಧ್ಯತೆಯನ್ನು ಸುಧಾರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.
ತರಬೇತಿ ಕಾರ್ಯಕ್ರಮದ ಉದ್ಘಾಟನೆಯೊಂದಿಗೆ ಜಿಲ್ಲಾಧಿಕಾರಿಗಳು 27 ಬಗೆಯ ಕಾಳುಮೆಣಸಿನ ತಳಿ ಸಂಗ್ರಹವನ್ನು ನಡೆಸಿದರು. ರೋಗನಿರೋಧಕ ಶಕ್ತಿ ಹೊಂದಿರುವ 'ಕುಂಬುಕ್ಕಲ್' ತಳಿಯ ಕಾಳುಮೆಣಸನ್ನು ಸಂಸ್ಥೆಯ ಮುಖ್ಯಸ್ಥರಿಂದ ಸ್ವೀಕರಿಸಲಾಯಿತು. ಜೊತೆಗೆ ನೀಲಂ ಮತ್ತು ಅಲ್ಫೋನ್ಸಾ ತಳಿಗಳ ನಡುವಿನ ತಳಿಯಾದ ಸ್ಪಂಜಿಟಿಶ್ಯೂಗೆ ನಿರೋಧಕವಾದ ಹೈಬ್ರಿಡ್ 'ರತ್ನ' ಗಿಡವನ್ನು ನೆಟ್ಟರು.
ವರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು. ತ್ರಿಸ್ಥರ ಮಟ್ಟದ ಪಂಚಾಯಿತಿ ಪ್ರತಿನಿಧಿಗಳು ಮಾತನಾಡಿದರು. ತರಬೇತಿ ಕೇಂದ್ರದ ಮುಖ್ಯಸ್ಥ ಬಾರಿಕಾಡ್ ರಮೇಶ, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎ.ಆದಿರಾ ತರಗತಿ ನಡೆಸಿದರು. ತರಬೇತಿಯಲ್ಲಿ ರಾಗಿ, ಸಾಮೆ ಸಹಿತ ಕಿರುಧಾನ್ಯಗಳ ಸಾಗುವಳಿ ವಿಧಾನಗಳು, ಗುಣಮಟ್ಟ, ಉಪಯೋಗಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಯಿತು. ರೈತರು, ಉದ್ಯಮಿಗಳು, ಕುಟುಂಬಶ್ರೀ ಕಾರ್ಯಕರ್ತರು ಮತ್ತು ಯುವಕರು ತರಬೇತಿಯಲ್ಲಿ ಭಾಗವಹಿಸಿದ್ದರು.