HEALTH TIPS

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನ: ಚೀತಾಗೆ ಮೃತ್ಯುವಾದ ರೇಡಿಯೊ ಕಾಲರ್!

                ಶಿವಪುರ : ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಎರಡು ಗಂಡು ಚೀತಾಗಳ ಸಾವಿಗೆ ರಕ್ತದ ನಂಜು (ಸೆಪ್ಟಿಸೇಮಿಯಾ) ಕಾರಣವಾಗಿರುವ ಸಂಗತಿ ಬಯಲಾಗಿದೆ.

                ಈ ಸಿವಂಗಿಗಳ ಚಲನವಲನ ಕುರಿತ ಅಧ್ಯಯನಕ್ಕೆ ಕೊರಳಿಗೆ ತೊಡಿಸಿದ್ದ ರೇಡಿಯೊ ಕಾಲರ್‌ ಅವುಗಳಿಗೆ ಮೃತ್ಯುವಾಗಿ ಪರಿಣಮಿಸಿದೆ.

                 ದಕ್ಷಿಣ ಆಫ್ರಿಕಾದಿಂದ ತಂದಿದ್ದ 'ತೇಜಸ್‌' ಹಾಗೂ 'ಸೂರಜ್' ಹೆಸರಿನ ಚೀತಾಗಳು ಒಂದು ವಾರದ ಅವಧಿಯಲ್ಲಿ ಮೃತಪಟ್ಟಿದ್ದವು. ಇವುಗಳ ಸಾವಿನೊಂದಿಗೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಉದ್ಯಾನದಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 8ಕ್ಕೇರಿತ್ತು. ಇದು ಭಾರತದಲ್ಲಿ ಅವುಗಳ ಸಂತತಿ ಪುನರುತ್ಥಾನ ಯೋಜನೆ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತ್ತು.

                'ಉದ್ಯಾನದಲ್ಲಿ ಹೆಚ್ಚಿನ ಆರ್ದ್ರ ವಾತಾವರಣವಿದ್ದು, ಇದರಿಂದ ಅವುಗಳ ಕೊರಳಿಗೆ ತೊಡಿಸಿದ್ದ ರೇಡಿಯೊ ಕಾಲರ್‌ನಿಂದ ಗಾಯಗೊಂಡು ಸೋಂಕು ತಗುಲಿದೆ. ಇದರಿಂದ ರಕ್ತವು ವಿಷವಾಗಿ ಮಾರ್ಪಟ್ಟು ಚೀತಾಗಳನ್ನು ಬಲಿ ಪಡೆದಿದೆ' ಎಂದು ಚೀತಾ ಸಂತತಿ ಪುನರುತ್ಥಾನ ಯೋಜನೆಯ ವ್ಯವಸ್ಥಾಪಕ ಮತ್ತು ಚೀತಾ ಸಂರಕ್ಷಕ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಸುದ್ದಿಸಂಸ್ಥೆಗೆ ಖಚಿತಪಡಿಸಿದ್ದಾರೆ.

              'ಯಾವುದೇ ಪ್ರಾಣಿಗಳಿಂದ ಇವುಗಳು ಗಾಯಗೊಂಡಿಲ್ಲ. ರಕ್ತ ವಿಷಗೊಂಡಿದ್ದರಿಂದ ಅಸುನೀಗಿವೆ' ಎಂದು ಸ್ಪಷ್ಟಪಡಿಸಿದ್ದಾರೆ.

               ಭಾರತದಲ್ಲಿ ಚೀತಾ ಸಂತತಿ ಪುನರುತ್ಥಾನ ಯೋಜನೆಯ ಭವಿಷ್ಯ ಕುರಿತು ಪ್ರತಿಕ್ರಿಯಿಸಿದ ಅವರು, 'ಪುನರುತ್ಥಾನ ಯೋಜನೆಯ ಅನುಷ್ಠಾನದಲ್ಲಿ ನೈಸರ್ಗಿಕ ಸಾವು ಸಹಜವಾದುದು. ಇದು ಸರಾಸರಿ ಸಾವಿನ ಪ್ರಮಾಣವನ್ನು ದಾಟಿಲ್ಲ. ಭಾರತಕ್ಕೆ ತಂದಿರುವ ಚೀತಾಗಳ ಪೈಕಿ ಶೇ 75ರಷ್ಟು ಜೀವಂತವಾಗಿದ್ದು, ಆರೋಗ್ಯವಾಗಿವೆ. ಹಾಗಾಗಿ, ಆತಂಕಪಡಬೇಕಿಲ್ಲ' ಎಂದಿದ್ದಾರೆ.

                 ಅರಣ್ಯ ಇಲಾಖೆ ಹೇಳಿದ್ದೇನು?: ಇತರೇ ಚೀತಾಗಳ ನಡುವೆ ಕಾದಾಟ ನಡೆಸಿದ ವೇಳೆ 'ತೇಜಸ್‌' ಮೃತಪಟ್ಟಿರಬಹುದು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದರು. ಇದಕ್ಕೆ ಅದರ ಕೊರಳಿನ ಸುತ್ತ ಗಾಯಗಳಾಗಿರುವುದನ್ನು ಅವರು ಸಕಾರಣ ನೀಡಿದ್ದರು. ಜೊತೆಗೆ, 'ಸೂರಜ್‌' ಕೊರಳು ಮತ್ತು ಹಿಂಭಾಗದಲ್ಲಿ ಗಾಯದ ಗುರುತುಗಳಾಗಿದ್ದು, ತಪಾಸಣೆ ವೇಳೆ ಕಂಡುಬಂದಿತ್ತು.

               'ಎರಡೂ ಚೀತಾಗಳ ಮರಣೋತ್ತರ ಪರೀಕ್ಷಾ ವರದಿಯನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ' ಎಂದು ಪ್ರತಿಕ್ರಿಯಿಸಿದ ಕುನೊ ಉದ್ಯಾನದ ನಿರ್ದೇಶಕ ಉತ್ತಮ್‌ ಶರ್ಮಾ, ವರದಿಯ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.

                                                  ಏನಿದು ವಿಷರಕ್ತ ಆಘಾತ?

                   ಗಾಯಗೊಂಡಾಗ ದೇಹವೊಕ್ಕುವ ಬ್ಯಾಕ್ಟೀರಿಯಾಗಳು ಯಾವುದಾದರೊಂದು ಅಂಗದಲ್ಲಿ ಸೇರಿಕೊಂಡು ನಂಜು ಉಂಟು ಮಾಡುತ್ತವೆ. ಕೆಲವೊಮ್ಮೆ ಉಸಿರಾಟದ ಮೂಲಕವೂ ದೇಹ ಸೇರುವ ಇವು ಶ್ವಾಸಕೋಶವನ್ನು ಸೇರುತ್ತವೆ. ಅಲ್ಲಿ ನಂಜು ಉಂಟು ಮಾಡಿ ನೇರವಾಗಿ ನೆತ್ತರನ್ನು ಸೇರುತ್ತವೆ.

ರಕ್ತದಲ್ಲಿ ನಂಜು ಹೆಚ್ಚಾದಾಗ ಅದು ವಿಷವಾಗಿ ಪರಿಣಮಿಸುತ್ತದೆ. ಇಂತಹ ವಿಷ ರಕ್ತವು ದೇಹದಲ್ಲಿ ಸಂಚರಿಸಿದಾಗ ಎಲ್ಲಾ ಅಂಗಗಳಿಗೂ ನಂಜು ಹರಡುತ್ತದೆ. ಇದು ಬಹುಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ದೇಹದ ತುಂಬೆಲ್ಲಾ ನಂಜು ಹರಡುವ ಕ್ರಿಯೆಗೆ ವಿಷರಕ್ತ ಆಘಾತ ಅಥವಾ ನೆತ್ತರು ನಂಜು (ಸೆಪ್ಟಿಸೇಮಿಯಾ) ಎಂದು ಕರೆಯಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries