ಪಟ್ನಾ: ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ಬಂಜೆತನ ಸಕಾರಣವಾಗದು ಎಂದು ಪಟ್ನಾ ಹೈಕೋರ್ಟ್ ಹೇಳಿದೆ.
ಮಗುವಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದದಿರುವುದು ವೈವಾಹಿಕ ಜೀವನದ ಸಮಸ್ಯೆಯ ಒಂದು ಅಂಶ ಮಾತ್ರ. ಹೀಗಾಗಿ, ದತ್ತು ತೆಗೆದುಕೊಳ್ಳುವುದು ಅಥವಾ ಮಕ್ಕಳನ್ನು ಪಡೆಯಲು ಪರ್ಯಾಯ ಆಯ್ಕೆಗಳ ಕುರಿತು ದಂಪತಿ ಆಲೋಚಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಿತೇಂದ್ರಕುಮಾರ್ ಹಾಗೂ ಪಿ.ಬಿ.ಭಜಂತ್ರಿ ಅವರಿದ್ದ ನ್ಯಾಯಪೀಠ ಹೇಳಿದೆ.
ನ್ಯಾಯಪೀಠವು ಸೋನುಕುಮಾರ್ ವಿರುದ್ಧ ರೀನಾ ದೇವಿ ಪ್ರಕರಣದ ವಿಚಾರಣೆ ನಡೆಸಿತು.
'ಮಗುವನ್ನು ಹೊಂದುವ ಸಾಮರ್ಥ್ಯ ಇಲ್ಲದಿರುವುದು ಷಂಡತನವಾಗದು ಅಥವಾ ಮದುವೆಯನ್ನು ರದ್ದುಗೊಳಿಸಲು ಆಧಾರವೂ ಆಗದು. ದಂಪತಿ ಪೈಕಿ ಯಾರಲ್ಲಿಯೂ ಇಂತಹ ಸಮಸ್ಯೆ ಕಂಡುಬರಬಹುದು. ಇಂತಹ ಸಂದರ್ಭಗಳಲ್ಲಿ ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡಲು ಆಗದು' ಎಂದು ನ್ಯಾಯಪೀಠ ಹೇಳಿದೆ.
ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸೋನುಕುಮಾರ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿತು.