ಉಪ್ಪಳ : ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 20ನೇ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಮಂಗಳೂರಿನ ಶ್ರೀ ರಾಮಕೃಷ್ಣ ಮಿಷನ್ ವತಿಯಿಂದ ಯುವಕರಿಗೆ ವಸ್ತ್ರವಿತರಣೆ'ಅರ್ಪಣಾ'ಕಾರ್ಯಕ್ರಮ ಶ್ರೀಮಠದ ಗಾಯತ್ರೀ ಮಂಟಪದಲ್ಲಿ ಭಾನುವಾರ ನಡೆಯಿತು.
ಮಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಸ್ವಾಮೀ ಜಿತಕಾಮಾನಂದಜೀ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು ನಾವೆಲ್ಲರೂ ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿ, ಜಗತ್ತಿಗೆ ಒಳಿತು ಮಾಡುತ್ತಾ ಭಗವಂತನೆಡೆಗೆ ಸಾಗುವಲ್ಲಿ ಪ್ರತಿಯೊಬ್ಬ ಪಣತೊಡಬೇಕು. 120 ವರ್ಷಗಳ ಹಿಂದೆ ಸ್ವಾಮೀ ವಿವೇಕಾನಂದರು ಸೇವೆಯ ಉದ್ದೇಶದಿಂದ ಸ್ಥಾಪನೆಗೈದ ರಾಮಕೃಷ್ಣ ಮಿಷನ್ ದೇಶಾದ್ಯಂತ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ.ಪ್ರಸಕ್ತ ಕೊಂಡೆವೂರು ಮಠದ ಸಹಯೋಗದಲ್ಲಿ ಈ ವಿಶಿಷ್ಟ ಅರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.
ದಿವ್ಯಸಾನ್ನಿಧ್ಯ ವಹಿಸಿದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಎಲ್ಲ ಸ್ತರದ ಜನರ ಮೇಲೂ ಕಳಕಳಿ ತೋರಿ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಜೊತೆ ಕೈಜೋಡಿಸಲು ಸಂತಸವಾಗುತ್ತಿದೆ ಎಂಬುದಾಗಿ ರಾಮಕೃಷ್ಣಮಿಷನ್ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಶಶಿಧರ ಶೆಟ್ಟಿ ಗ್ರಾಮಚಾವಡಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ 350ಕ್ಕೂ ಹೆಚ್ಚು ಯುವಕರಿಗೆ ವಸ್ತ್ರಪ್ರಸಾದ ಪಡೆದುಕೊಂಡರು. ಕು.ಶ್ರಾವಣ್ಯ ಪ್ರಾರ್ಥನೆ ಹಾಡಿದರು. ಗಂಗಾಧರ ಕೊಂಡೆವೂರು ಸ್ವಾಗತಿಸಿದರು. ದಿನಕರ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.