ಟೊಮೆಟೋವನ್ನು ಸಾಮಾನ್ಯವಾಗಿ ಹೆಚ್ಚಿನ ಆಹಾರ ಪದಾರ್ಥಗಳನ್ನು ತಯಾರು ಮಾಡೋವಾಗ ಬಳಕೆ ಮಾಡದೇ ಇರೋದಿಲ್ಲ. ಪ್ರತಿಯೊಂದು ಸಾಂಬಾರು, ಪಲ್ಯ, ತಿಂಡಿ-ತಿನಿಸುಗಳನ್ನು ತಯಾರಿಸುವಾಗ ಟೊಮೇಟೋ ಬೇಕೇ ಬೇಕು. ಸಾಮಾನ್ಯ ಬೆಲೆಯಲ್ಲಿ ನಮಗೆ ಟೊಮೆಟೋ ಲಭ್ಯವಾದ್ರೂ ಕೂಡ ಕೆಲವೊಂದು ಸಾರಿ ಏಕಾಏಕಿ ಟೊಮೆಟೋ ಬೆಲೆ ಗಗನಕ್ಕೇರುತ್ತದೆ.
ಅದ್ರಲ್ಲೂ ಮಳೆಗಾಲದಲ್ಲಂತೂ ಪ್ರವಾಹದಂತಹ ಪರಿಸ್ಥಿತಿ ಎದುರಾದ್ರೆ ರೈತರ ಬೆಳೆದ ಬೆಳೆಯೆಲ್ಲಾ ಕೊಚ್ಚಿ ಹೋಗುತ್ತದೆ. ಈ ಸಮಯದಲ್ಲಿ ಟೊಮೆಟೋದ ಬೆಲೆ ಗಗನಕ್ಕೇರೋದು ಗ್ಯಾರಂಟಿ. ಇನ್ನೂ ಕೆಲವೊಂದು ಸಲ ದುಡ್ಡು ಕೊಡ್ತೀವಿ ಅಂದ್ರೂನೂ ಟೊಮೆಟೋ ಸಿಗೋದಿಲ್ಲ. ಇಂತಹ ಸಮಯದಲ್ಲಿ ಟೊಮೆಟೋಗೆ ಬದಲಾಗಿ ಹುಳಿ ಅಂಶವನ್ನ ನೀಡೋದಕ್ಕೆ ಯಾವ ಆಹಾರ ಪದಾರ್ಥಗಳನ್ನು ಬಳಕೆ ಮಾಡ್ಬಹುದು ಅನ್ನೋದನ್ನು ತಿಳಿಯೋಣ.
1. ಮಾವಿನಕಾಯಿ ಪುಡಿ
ಟೊಮೆಟೋ ಬೆಲೆ ಹೆಚ್ಚಾದಾಗ ಅಥವಾ ಟೊಮೆಟೋ ಲಭ್ಯವಿರದ ಸಮಯದಲ್ಲಿ ನೀವು ಟೊಮೆಟೋಗೆ ಬದಲಾಗಿ ಮಾವಿನಕಾಯಿ ಪುಡಿಯನ್ನು ಸಾಂಬಾರು ಅಥವಾ ಪಲ್ಯಗಳಿಗೆ ಬಳಕೆ ಮಾಡಬಹುದು. ಮಾವಿನ ಕಾಯಿಯನ್ನು ಸರಿಯಾಗಿ ಒಣಗಿಸಿ ಪುಡಿ ಮಾಡಿ ಒಂದು ಡಬ್ಬದಲ್ಲಿ ಗಾಳಿ ಆಡದಂತೆ ಇಟ್ಟುಕೊಳ್ಳಿ. ನಂತರ ಅಗತ್ಯವಿದ್ದಾಗ ಹುಳಿಯ ಬದಲಾಗಿ ಇದನ್ನು ಬಳಸಿಕೊಳ್ಳಬಹುದು.
2. ಹುಣಸೆ ಹಣ್ಣು
ಟೊಮೆಟೋಗೆ ಬದಲಾಗಿ ಹುಣಸೆ ಹಣ್ಣನ್ನು ಬಳಕೆ ಮಾಡಬಹುದು. ಮೊದಲಿಗೆ ನಾಲ್ಕೈದು ಹುಣಸೆ ಹಣ್ಣನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿಡಿ. ಆ ನಂತರ 15-20 ಆದ ಮೇಲೆ ಹುಣಸೆ ಬೀಜಗಳನ್ನು ತೆಗೆದು, ಹುಣಸೆ ಹಣ್ಣನ್ನು ಹಿಂಡಿ ಸಾಂಬಾರು ಅಥವಾ ಪಲ್ಯಗಳಿಗೆ ಬಳಕೆ ಮಾಡಬಹುದು. ಟೊಮೆಟೋಗಿಂತಲೂ ಹುಣಸೆ ಹಣ್ಣು ಹೆಚ್ಚು ಹುಳಿಯಾಗಿ ಇರೋದ್ರಿಂದ ಸ್ವಲ್ಪವೇ ಸ್ವಲ್ಪ ಹುಣಸೆ ಹಣ್ಣನ್ನು ಪದಾರ್ಥಕ್ಕೆ ಸೇರಿಸಿದ್ರೆ ಸಾಕು.
3. ನೆಲ್ಲಿಕಾಯಿ
ಟೊಮೆಟೋಗೆ ಬದಲಾಗಿ ನಮಗೆ ನೆಲ್ಲಿಕಾಯಿ ಕೂಡ ಹುಳಿ ಅಂಶವನ್ನು ನೀಡುತ್ತದೆ. ಆದರೆ ಇದನ್ನು ಬಳಕೆ ಮಾಡುವಾಗ ಜಾಗರೂಕತೆಯಿಂದ ಇರಬೇಕು. ಸ್ವಲ್ಪ ಹೆಚ್ಚು-ಕಡಿಮೆ ಆದರೂ ಕೂಡ ಸಾಂಬಾರು ಹಾಳಾಗಬಹುದು. ಇದನ್ನು ಬಳಸುವ ವಿಧಾನ ಹೇಗೆಂದರೆ ನೀರಿಗೆ ಸಕ್ಕರೆ ಹಾಕಿ ಅದ್ರಲ್ಲಿ ನೆಲ್ಲಿಕಾಯಿ ಹಾಕಿ ಹಾಕಿಡಿ. ಆನಂತರ ಅದನ್ನು ಕಡೆದು ನೀರನ್ನು ತೆಗದು ಅದನ್ನು ಬಳಕೆ ಮಾಡಬಹುದು.
4. ಮೊಸರು
ಟೊಮೆಟೋಗಿಂತಲೂ ಎರಡು ದಿನ ಇಟ್ಟ ಮೊಸರು ಮತ್ತಷ್ಟು ಹುಳಿಯಾಗಿರುತ್ತೆ. ಹೀಗಾಗಿ ನಮಗೆ ಯಾವ ಪದಾರ್ಥಗಳಿಗೆ ಟೊಮೆಟೋ ಬಳಕೆ ಮಾಡೋದಿಕ್ಕೆ ಆಗೋದಿಲ್ಲವೋ ಅದಕ್ಕೆ ನಾವು ಮೊಸರನ್ನು ಬಳಕೆ ಮಾಡಬಹುದು. ಕಬಾಬ್ ಅಥವಾ ಬಿರಿಯಾನಿ ಮಾಡುವಾಗ ನಾವು ಮೊಸರನ್ನು ಬಳಕೆ ಮಾಡುತ್ತೇವೆ. ಯಾಕಂದ್ರೆ ಇದು ಮಾಂಸವನ್ನು ಮೃದು ಮಾಡೋದು ಮಾತ್ರವಲ್ಲದೇ, ಮಾಂಸದಲ್ಲಿ ಹುಳಿ ಹೆಚ್ಚಿಸೋದಕ್ಕೂ ಸಹಾಯ ಮಾಡುತ್ತೆ.
5. ವಿನೆಗರ್
ಟೊಮೆಟೊಗೆ ಬದಲಾಗಿ ನಾವು ವಿನೆಗರ್ ಅನ್ನು ಬಳಕೆ ಮಾಡಬಹುದು. ಆಪಲ್ ಸೈಡರ್ ವಿನೆಗರ್‌ನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಮತ್ತು ಕರುಳಿನ ಸೋಂಕು ಮತ್ತು ಅತಿಸಾರದೊಂದಿಗಿನ ಹೋರಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಜೀರ್ಣ ಕ್ರಿಯೆಗೂ ಸಹಾಯಮಾಡುತ್ತದೆ.
6. ಟೊಮೆಟೊ ಕೆಚಪ್
ಟೊಮೆಟೋ ಇಲ್ಲದ ಸಂದರ್ಭದಲ್ಲಿ ಟೊಮೆಟೋ ಕೆಚಪ್ ಬಳಕೆ ಮಾಡಬಹುದು. ಹಾಗಂತ ಸಾಂಬಾರು, ಪಲ್ಯಗಳಿಗೆ ಬಳಕೆ ಮಾಡೋದಕ್ಕೆ ಹೋಗಬೇಡಿ. ನಾವು ಮನೆಯಲ್ಲಿ ಬರ್ಗರ್, ಪಿಜ್ಜಾ ತಯಾರು ಮಾಡೋದಾದ್ರೆ ಅಂತಹ ಸಂದರ್ಭದಲ್ಲಿ ಬಳಕೆ ಮಾಡಬಹುದು. ಸ್ವಲ್ಪ ಸಿಹಿಯಾಗಿ, ಹುಳಿಯಾಗಿ ಚೆನ್ನಾಗಿರುತ್ತೆ.
ಟೊಮೆಟೋ ಇಲ್ಲದಾಗ ಅಥವಾ ಟೊಮೆಟೋಗೆ ಬೆಲೆ ಹೆಚ್ಚಾದಾಗ ಏನಪ್ಪಾ ಮಾಡೋದು ಅಂತ ತಲೆ ಮೇಲೆ ಕೈ ಹೊತ್ತು ಕೂರಬೇಕಾಗಿಲ್ಲ. ಟೊಮೆಟೋಗೆ ಬದಲಾಗಿ ಈ ವಸ್ತುಗಳನ್ನು ಬಳಕೆ ಮಾಡಿದ್ರೆ ಸಾಕು.