ಕಾಸರಗೋಡು: ಶಾಲಾ ವಠಾರದ ಮರವುರುಳಿ ಜಿಲ್ಲೆಯ ಪುತ್ತಿಗೆ ಅಂಗಡಿಮೊಗರಿನ ಬಾಲಕಿ ದಾರುಣವಾಗಿ ಮೃತಪಟ್ಟ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಶಾಲಾ ವಠಾರದ ಅಪಾಯಕಾರಿ ಮರಗಳ ರೆಂಬೆ ಅಥವಾ ಮರಗಳನ್ನು ಕಡಿದುರುಳಿಸಲು ಆದೇಶಿಸಿದೆ. ವರ್ಷದ ಹಿಂದಿನಿಂದಲೇ ಈ ಆದೇಶ ಜಾರಿಯಲ್ಲಿದ್ದರೂ, ಕಟ್ಟುನಿಟ್ಟಾಗಿ ಈ ಆದೇಶ ಜಾರಿಯಾಗದಿರುವುದರಿಂದ ಕೆಲವು ಶಾಲೆಗಳಲ್ಲಿ ಸಮಸ್ಯೆಗೆ ಕಾರಣವಾಗಿದೆ.
ಅಪಾಯಕಾರಿ ಮರಗಳ ಹೆಸರಲ್ಲಿ ಶಾಲಾ ವಠಾರದ ಮರಗಳಿಗೆ ವ್ಯಾಪಕವಾಗಿ ಕೊಡಲಿ ಬೀಳುವ ಭೀತಿಯೂ ಎದುರಾಗುತ್ತಿದೆ.
ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಸತತ ನಾಲ್ಕು ದಿವಸಗಳಿಂದ ಶಾಲೆಗಳಿಗೆ ರಜೆ ಘೋಷಿಸುತ್ತಾ ಬಂದಿರುವ ಜಿಲ್ಲಾಧಿಕಾರಿ, ಕೆ. ಇನ್ಬಾಶೇಖರ್ ಗುರುವಾರ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಇತರ ಅಧಿಕಾರಿಗಳನ್ನು ಆನ್‍ಲೈನ್ ಮೀಟ್ ಮೂಲಕ ಸಂಪರ್ಕಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಶಾಲೆ ವಠಾರದ ಅಪಾಯಕಾರಿ ಮರಗಳನ್ನು ಕಟಾವುಗೊಳಿಸುವುದರ ಜತೆಗೆ ಯವುದೇ ಹಂತದಲ್ಲಿ ಮುರಿದು ಬೀಳಬಹುದಾದ ರೆಂಬೆಗಳನ್ನು ಕಡಿದು ತೆಗೆಯಬೇಕು. ತಪ್ಪಿದಲ್ಲಿ ಆಯಾ ಶಾಲೆ ಮುಖ್ಯಸ್ಥರನ್ನು ಇದಕ್ಕೆ ಜವಾಬ್ದಾರರನ್ನಾಗಿಸಲಾಗುವುದು ಎಂದೂ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಕ್ಕಳನ್ನು ಪ್ರಾಕೃತಿಕ ವಿಪತ್ತುಗಳಿಂದ ರಕ್ಷಿಸುವುದು ಆಯಾ ಶಾಲೆಗಳ ಕರ್ತವ್ಯವಾಗಿದ್ದು, ಈ ವಿಷಯದಲ್ಲಿ ಲೋಪವುಂಟಾಗದಂತೆ ಗಮನಹರಿಸುವಂತೆಯೂ ಸೂಚಿಸಲಾಗಿದೆ. ಈಗಾಗಲೇ ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್(ಎಸ್‍ಪಿಜಿ), ಶಾಲಾ ರಕ್ಷಕ ಶಿಕ್ಷಕ ಸಂಘ(ಪಿಟಿಎ), ಶಾಲಾ ಅಭಿವೃದ್ಧಿ ಸಮಿತಿ ಮುಂತಾದುವುದುಗಳು ಆಯಾ ಶಾಲೆಗಳಲ್ಲಿ ಸಭೆ ನಡೆಸಿ ಶಾಲಾ ವಠಾರದ ಅಪಾಯಕಾರಿ ಮರಗಳನ್ನು ತೆರವುಗೊಳಿಸುವುದು ಯಾ ರೆಂಬೆಗಳನ್ನು ಕಡಿದು ತೆಗೆಯುವ ಬಗ್ಗೆ ತೀರ್ಮನವನ್ನೂ ಕೈಗೊಂಡಿದೆ.
ನೆಟ್ಟ ಕೈಗಳಿಂದ ಮರಕ್ಕೆ ಕೊಡಲಿ:
ವಿಶ್ವ ಪರಿಸರ ದಿನಾಚರಣೆಯಂದು ಗಿಡ ನೆಟ್ಟು ಬೆಳೆಸಿರುವ ಮರಗಳಿಗೆ ಜುಲೈ ತಿಂಗಳ ವೇಳೆಗೆ ಕೊಡಲಿಯೇಟು ಹಾಕಹೇಕಾಗಿ ಬಂದಿರುವುದು ಪರಿಸರ ಪ್ರಿಯರಲ್ಲಿ ನೋವನ್ನುಂಟುಮಡಿದೆ. ಸರ್ಕಾರದ ತೀರ್ಮಾನ ಹಗೂ ಮಕ್ಕಳ ಸಂರಕ್ಷಣೆ ದೃಷ್ಟಿಯಿಂದ ಈ ಕೆಲಸ ನಡೆಸಬೇಕಾಗಿರುವುದು ಅನಿವಾರ್ಯ ಎಂಬುದಾಗಿ ಇಲ್ಲಿನ ಶಿಕ್ಷಕರು ತಿಳಿಸುತ್ತಾರೆ.
ಅಭಿಮತ:
ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು ತೋರುವ ನಿರ್ಲಕ್ಷ್ಯವನ್ನು ಸಹಿಸಲಾಗದು. ಅಪಾಯ ಇಲ್ಲವೆಂದು ಖಚಿತವಿದ್ದಲ್ಲಿ ಮಾತ್ರ ಮರವನ್ನು ಉಳಿಸಿ ರೆಂಬೆಗಳನ್ನು ಕಡಿದುರುಳಿಸಿದರೆ ಸಾಕು. ಮಕ್ಕಳ ರಕ್ಷಣೆ ಬಗ್ಗೆ ಆಯಾ ಶಾಲೆಗಳು ಹೆಚ್ಚಿನ ನಿಗಾ ವಹಿಸಬೇಕು.
ಕೆ. ಇನ್ಬಾಶೇಖರ್, ಜಿಲ್ಲಾಧಿಕಾರಿ
ಕಾಸರಗೋಡು