ನವದೆಹಲಿ: ಮಣಿಪುರದ ಪರಿಸ್ಥಿತಿಯ ಬಗ್ಗೆ ಸದನದಲ್ಲಿ ಚರ್ಚಿಸುವಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಒತ್ತಾಯಿಸಿದ್ದಾರೆ ಎಂದು ಲೋಕಸಭೆಯಲ್ಲಿನ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಮುಂಗಾರು ಅಧಿವೇಶನದ ಮೊದಲ ದಿನದಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಿರು ಮಾತುಕತೆ ಸಂದರ್ಭದಲ್ಲಿ ಈಶಾನ್ಯ ರಾಜ್ಯದಲ್ಲಿನ ಹಿಂಸಾಚಾರದ ಬಗ್ಗೆ ಚರ್ಚಿಸುವಂತೆ ಸೋನಿಯಾ ಗಾಂಧಿ ಅವರು ಪ್ರಧಾನಿಯನ್ನು ಒತ್ತಾಯಿಸಿರುವುದಾಗಿ ಅವರು ತಿಳಿಸಿದರು.
ಪ್ರಧಾನಿ ಮೋದಿ ಮಣಿಪುರ ಪರಿಸ್ಥಿತಿ ಕುರಿತು ಸಂಸತ್ತಿನ ಹೊರಗೆ ಮಾತನಾಡುತ್ತಿರುವುದು ವಿಚಿತ್ರವೆನಿಸುತ್ತದೆ. ಅವರು ಸದನದೊಳಗೆ ಮಾತನಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದ ಚೌಧರಿ, ಸಂಸತ್ ಅತಿದೊಡ್ಡ ವೇದಿಕೆ. ಮಣಿಪುರದ ಬಗ್ಗೆ ಕೇಳಿದಾಗ ಪ್ರಧಾನಿ ರಾಜಸ್ಥಾನದ ಬಗ್ಗೆ ಮಾತನಾಡುತ್ತಾರೆ. ಎಲ್ಲದರ ಬಗ್ಗೆ ಮಾತನಾಡಿ ಆದರೆ ಮಣಿಪುರದಿಂದ ಪ್ರಾರಂಭಿಸಿ ಎಂದರು.
ಸೇನಾಪತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುಂಪೊಂದು ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡಿರುವ ವಿಡಿಯೋವೊಂದರಲ್ಲಿ ಕಾಣಿಸಿಕೊಂಡ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಮಣಿಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.