ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದ್ದಾರೆ.
ಮಣಿಪುರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆಗೆ ಒತ್ತಾಯಿಸಲು ಮುಂದಾಗಿದ್ದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಸದಸ್ಯರು ಅಡ್ಡಿ ಮಾಡಿದರು ಎಂದು ಆರೋಪಿಸಿ ಇಂಡಿಯಾ ಒಕ್ಕೂಟದ ಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ ಬೆನ್ನಲ್ಲೇ ಶಾ ಈ ಹೇಳಿಕೆ ನೀಡಿದ್ದಾರೆ.
'ಲೋಕಸಭೆ ಮತ್ತು ರಾಜ್ಯಭೆಯ ವಿರೋಧ ಪಕ್ಷದ ನಾಯಕರಿಗೆ ಈ ಕುರಿತಂತೆ ಪತ್ರ ಬರೆದಿದ್ದು, ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಚರ್ಚೆಗೆ ಸಿದ್ಧವಿದೆ. ಹಾಗಾಗಿ, ಸುಗಮ ಕಲಾಪದ ವಾತಾವರಣಕ್ಕೆ ಅವಕಾಶ ಮಾಡಿಕೊಡಿ' ಎಂದು ಮನವಿ ಮಾಡಿದ್ದಾರೆ.
ಇದೇವೇಳೆ, ಮಣಿಪುರ ಹಿಂಸಾಚಾರ ಕುರಿತ ಚರ್ಚೆ ನಡೆಸಲು ಸರ್ಕಾರಕ್ಕೆ ಯಾವುದೇ ಭಯವಿಲ್ಲ. ಯಾರೆಲ್ಲ ಚರ್ಚೆ ಮಾಡಬೇಕೆಂದುಕೊಂಡಿದ್ದಾರೆ ಅವರು ಚರ್ಚೆ ಮಾಡಲಿ. ಸರ್ಕಾರಕ್ಕೆ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಈ ನಡುವೆ ಮಣಿಪುರ ಹಿಂಸಾಚಾರ ವಿಷಯಕ್ಕೆ ಸಂಬಂಧಿಸಿ ವಿಪಕ್ಷಗಳ ನಾಯಕರು'ಶೇಮ್ ಶೇಮ್' ಎಂದು ಘೋಷಣೆ ಕೂಗುತ್ತಲಿದ್ದರೂ ಮಾತು ಮುಂದುವರಿಸಿದ ಶಾ, ವಿಜಯದಶಮಿ ಅಥವಾ ದೀಪಾವಳಿಗೂ ಮುನ್ನ ಹೊಸ ಸಹಕಾರ ನೀತಿ ಜಾರಿಗೆ ತರುವುದಾಗಿ ಹೇಳಿದರು.