ಮುಂಬೈ: ಭಾರತದ ನಂಬರ್ ಒನ್ ಉದ್ಯಮಿ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿಯವರ ಪತ್ನಿ ಟೀನಾ ಅವರು ಜುಲೈ 4ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.
ಉದ್ಯಮಿ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ 1999 ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ದಾಖಲಾಗಿರುವ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅನಿಲ್ ಅಂಬಾನಿ ಅವರನ್ನು ತನಿಖಾ ಸಂಸ್ಥೆ ಪ್ರಶ್ನಿಸಿದ ಒಂದು ದಿನದ ನಂತರ ಟೀನಾ ಅಂಬಾನಿ ಇಂದು ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಇದು ಅಂಬಾನಿ ಕಂಪನಿಗಳಲ್ಲಿನ ಹೂಡಿಕೆಗೆ ಸಂಬಂಧಿಸಿದ ಹೊಸ ಪ್ರಕರಣ ಎಂದು ಮೂಲಗಳು ತಿಳಿಸಿವೆ.
64 ವರ್ಷದ ಅನಿಲ್ ಅಂಬಾನಿ ಅವರು ಈ ಹಿಂದೆ 2020 ರಲ್ಲಿ ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು.