ಕಾಸರಗೋಡು: ಜಿಲ್ಲೆಯ ಸರ್ಕಾರಿ ಮಟ್ಟದ ಏಕೈಕ ಶಿಕ್ಷಕರ ತರಬೇತಿ ಕೇಂದ್ರ(ಟಿಟಿಸಿ)ಮಾಯಿಪ್ಪಾಡಿಯ ಡಯೆಟ್‍ನಲ್ಲಿ ಕನ್ನಡ ಮಾಧ್ಯಮ ಶಿಕ್ಷಕಕರ ತರಬೇತಿಗಿರುವ ಸೀಟುಗಳ ಸಂಖ್ಯೆ ಹೆಚ್ಚಳಗೊಳಿಸುವಂತೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿದೆ.
ಮಾಯಿಪ್ಪಾಡಿ ರಾಜ ಮನೆತನದವರು ನೀಡಿರುವ 25 ಎಕರೆ ಜಾಗದಲ್ಲಿ ಟಿಟಿಸಿ ಕೇಂದ್ರ ಚಟುವಟಿಕೆ ನಡೆಸುತ್ತಿದ್ದು, ಆರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ಮಾತ್ರ ಇದ್ದ ಟಿಟಿಸಿ ಕೇಂದ್ರ ಪ್ರಸಕ್ತ ಮಲಯಾಳ ಮಾಧ್ಯಮವೂ ಆರಂಭಗೊಂಡಿದೆ. ಕನ್ನಡ ಮಾಧ್ಯಮದಲ್ಲಿ ಕೇವಲ 40ಸೀಟುಗಳು ಮಾತ್ರ ಇದ್ದು, ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮತ್ತಷ್ಟು ಸೀಟು ಒದಗಿಸಿಕೊಡುವಂತೆ ಆಗ್ರಹ ಕೇಳಿಬರಲಾರಂಭಿಸಿದೆ. ಪ್ರಸಕ್ತ ಡಿಪ್ಲೊಮ ಇನ್ ಎಲಿಮೆಂಟರಿ ಎಜುಕೇಶನ್ ಕೋರ್ಸ್‍ಗೆ ಸೇರ್ಪಡೆಗೊಳ್ಳಲು ಕನಿಷ್ಠ ಪ್ಲಸ್‍ಟು ಯಾ ಪಿಡಿಸಿ ಯಾ ಪಿಯುಸಿ ತತ್ಸಮಾನ ಪರೀಕ್ಷೆ ಉತ್ತೀರ್ಣರಾಗಿರಬೇಕು. ಪ್ರಸಕ್ತ ಇರುವ 40ಸೀಟುಗಳಲ್ಲಿ ತಲಾ ಶೇ. 40 ಆಟ್ರ್ಸ್ ಮತ್ತು ಸಯನ್ಸ್ ಹಾಗೂ ಶೇ. 20 ಸೀಟು ವಾಣೀಜ್ಯ ವಿಭಾಗಕ್ಕೆ ಮೀಸಲಿರಿಸಲಾಗಿದೆ. ಜತೆಗೆ ಎಸ್‍ಸಿ-ಎಸ್‍ಟಿ ವಿಭಾಗಕ್ಕೂ ಕೆಲವೊಂದು ಸೀಟು ಮೀಸಲಿರಿಸಲಾಗಿದೆ. ಪ್ರಸಕ್ತ ಇರುವ ಸೀಟುಗಳ ಸಂಖ್ಯೆಯನ್ನು ಕನಿಷ್ಠ 80ಸೀಟುಗಳಿಗೆ ಹೆಚ್ಚಿಸಬೇಕು, ಅಥವಾ ಒಂದು ಬ್ಯಾಚ್ ಮಂಜೂರುಗೊಳಿಸಬೇಕು. ಈ ಮೂಲಕ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಟಿಟಿಸಿ ಕಲಿಕೆಗಾಘಿ ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ ವರ್ಷಕಳೆದಂತೆ ಹೆಚ್ಚಾಗುತ್ತಿದ್ದರೂ, ಸೀಮಿತ ಸಂಖ್ಯೆಯ ಸೀಟುಗಳಿರುವುದರಿಂದ ಬಹುತೇಕ ವಿದ್ಯಾರ್ಥಿಗಳ ಶಿಕ್ಷಕ ವೃತ್ತಿಯ ಕನಸು ನನಸಾಗುತ್ತಿಲ್ಲ. ಹೆಚ್ಚಿನ ಉದ್ಯೋಗ ಸಾಧ್ಯತೆಯಿರುವ ಕೋರ್ಸ್ ಇದಾಗಿರುವುದರಿಂದ ಸೀಟುಗಳ ಸಂಖ್ಯೆ ಹೆಚ್ಚಿಸುವಲ್ಲಿ ಸರ್ಕಾರ ಗಮನ ಹರಿಸುವಂತೆಯೂ ಆಗ್ರಹಿಸಲಾಗಿದೆ.