ಕಾಸರಗೋಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೇಕಲ ಸನಿಹದ ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಅಂಗವಾಗಿ ಸೋಮವಾರ ನಡೆದ ಪಿತೃಬಲಿತರ್ಪಣ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಅಗಲಿದ ತಮ್ಮ ಪೂರ್ವಜರ ಸದ್ಗತಿಗಾಗಿ ಪಿಂಡಪ್ರದಾನ ನಡೆಸಿ ಪ್ರಾರ್ಥಿಸಿದರು.
ಸೋಮವಾರ ನಸುಕಿನ 3ಗಂಟಗೇ ಭಕ್ತಾದಿಗಳು ದೇವಸ್ಥಾನ ಆಗಮಿಸಿ ಸರತಿಸಾಲಲ್ಲಿ ನಿಂತು, ಶ್ರೀ ತ್ರಯಂಬಕೇಶ್ವರನಿಗೆ ಪೂಜೆಸಲ್ಲಿಸಿದ ನಂತರ ದೇಗುಲದಿಂದ ನೀಡುವ ಅಕ್ಕಿ, ಹೂವಿನ ಪ್ರಸಾದದೊಂದಿಗೆ ಸಮುದ್ರ ಕಿನಾರೆಯಲ್ಲಿ ನಡೆಯುವ ಪಿತೃತರ್ಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಏಕ ಕಾಲಕ್ಕೆ 19ಮಂದಿ ಪುರೋಹಿತರು ಪಿತೃತರ್ಪಣ ಪೌರೋಹಿತ್ಯ ನೆರವೇರಿಸಿದರು. ತರ್ಪಣ ಕಾರ್ಯ ನಡೆಸಿದ ನಂತರ ಸಮುದ್ರ ಸ್ನಾನ ನಡೆಸಿದ ಭಕ್ತಾದಿಗಳು ಮತ್ತೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸ್ವೀಕರಿಸಿ ಪುನೀತರಾದರು.
ದೇವಸ್ಥಾನ ವಠಾರದ ಎಂಟು ಕೌಂಟ್‍ಗಳ ಮೂಲಕ ಪಿತೃತರ್ಪಣಕ್ಕಿರುವ ರಶೀದಿ ವಿತರಿಸಲಾಗಿತ್ತು. ಬೆಳಗ್ಗೆ ದೇವಸ್ಥಾನಕ್ಕೆ ತಲುಪುವ ಭಕ್ತಾದಿಗಳಿಗೆ ಆಹಾರ, ಪಾನೀಯ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು. ಪಿತೃತರ್ಪಣಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪೆÇಲೀಸರು, ಕೋಸ್ಟ್ ಗಾರ್ಡ್, ಆರೋಗ್ಯ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಚಂದ್ರಗಿರಿ ರೋವರ್ಸ್ ರೇಂಜರ್‍ಗಳು ಅಗತ್ಯ ನೆರವು ಒದಗಿಸಿದರು.