ತಿರುವನಂತಪುರಂ: ಆನ್‍ಲೈನ್ ವಂಚನೆಗೆ ಒಳಗಾದವರಿಗೆ ಕೇರಳ ಪೋಲೀಸರು ಸಾಂತ್ವನ ಹೇಳಿದ್ದಾರೆ. ಆನ್‍ಲೈನ್ ಮೂಲಕ 1 ಲಕ್ಷ ರೂ.ಗಿಂತ ಹೆಚ್ಚಿನ ಹಣದ ನಷ್ಟವನ್ನು ಪತ್ತೆಹಚ್ಚಲು ವೇಗದ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಪೋಲೀಸ್ ವಿಭಾಗ ಮಾಹಿತಿ ನೀಡಿದೆ.
24 ಗಂಟೆಗಳ ಸೈಬರ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿಯನ್ನು ವರದಿ ಮಾಡಿದರೆ, ನೀವು ವಂಚನೆಯಿಂದ ಪಾರಾಗಬಹುದು ಮತ್ತು ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನಿಯಂತ್ರಣ ಕೊಠಡಿ ಸಂಖ್ಯೆ 1930 ಸಂಪರ್ಕಿಸಬೇಕು. ಎ.ಐ ತಂತ್ರಜ್ಞಾನವನ್ನು ಬಳಸಿಕೊಂಡು ವಂಚನೆಯ ಮೂಲಕ ಕೋಝಿಕ್ಕೋಡ್‍ನ ಸ್ಥಳೀಯರೊಬ್ಬರು 40,000 ರೂಪಾಯಿಗಳನ್ನು ಕಳೆದುಕೊಂಡ ನಂತರ ಹೊಸ ತಂತ್ರಜ್ಞಾನ ವಿಸ್ತರಣೆಗೆ ಇಲಾಖೆ ಸಮರೋಪಾದಿಯಲ್ಲಿ ಸಿದ್ದಗೊಂಡಿದೆ.
ಇದರ ಭಾಗವಾಗಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ವಂಚನೆ ಮಾಡಿರುವ ದೂರು ಬಂದರೆ ಗಂಟೆಗಳಲ್ಲಿ ವಂಚನೆ ಮಾಡಿದವರ ಖಾತೆ ಪತ್ತೆ ಹಚ್ಚಲು ವಿಶೇಷ ತಂಡವನ್ನೂ ನೇಮಿಸಲಾಗಿದೆ. ವಂಚನೆಯ ಬಗ್ಗೆ ತಕ್ಷಣ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರೆ, ವಂಚನೆಯ ಗುಂಪಿನ ಖಾತೆಯ ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ. ಆನ್‍ಲೈನ್ ವಂಚನೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿದ್ದರೂ, ಪ್ರಮುಖ ವಂಚನೆಗಳನ್ನು ಪತ್ತೆಹಚ್ಚಲು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
ನೋಡಲ್ ಅಧಿಕಾರಿ ಎಸ್.ಪಿ.ಹರಿಶಂಕರ್ ಮಾತನಾಡಿ, ಘಟನೆ ನಡೆದ ಕೂಡಲೇ ದೂರು ದಾಖಲಿಸಬೇಕು. ಸಮಯ ಕಳೆದಂತೆ ವಂಚಕರು ಹಣ ಪಡೆದು ಪರಾರಿಯಾಗಲು ಅವಕಾಶವಿದ್ದು ಶೀಘ್ರ ದೂರು ದಾಖಲೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಅಪರಿಚಿತರು ನೀಡುವ ಲಿಂಕ್ ಗಳನ್ನು ಕ್ಲಿಕ್ ಮಾಡುವುದರಿಂದ ವಂಚನೆಯ ಸಾಧ್ಯತೆಯೂ ಹೆಚ್ಚುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.