ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವುದನ್ನು ಎತ್ತಿ ಹಿಡಿದು ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಬಾಲಾಜಿ ಅವರ ಪತ್ನಿ ಮೇಗಳಾ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಬಾಲಾಜಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೆಷನ್ಸ್ ನ್ಯಾಯಾಲಯ ಆದೇಶಿಸಿರುವುದು ಕೂಡ ಕಾನೂನುಬದ್ಧ ಎಂದು ಜುಲೈ 14ರಂದು ನೀಡಿರುವ ಆದೇಶದಲ್ಲಿ ಹೈಕೋರ್ಟ್ ಹೇಳಿದೆ.
'ಬಾಲಾಜಿ ಪತ್ನಿ ಮೇಗಳಾ ಅವರು ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ' ಎಂದು ಡಿಎಂಕೆ ವಕ್ತಾರ ಶರವಣನ್ ಹೇಳಿದ್ದಾರೆ.
ಬಾಲಾಜಿ ಅವರನ್ನು ಇ.ಡಿ ಬಂಧಿಸಿದ್ದು ಹಾಗೂ ಸೆಷನ್ಸ್ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ಪ್ರಶ್ನಿಸಿ ಮೇಗಳಾ ಅವರು ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಡಿ.ಭರತ ಚಕ್ರವರ್ತಿ ಹಾಗೂ ನಿಶಾ ಬಾನು ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಭಿನ್ನ ತೀರ್ಪು ನೀಡಿತ್ತು. ಆಗ, ಈ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ವಿ.ಕಾರ್ತಿಕೇಯನ್ ಅವರನ್ನು ಮೂರನೇ ನ್ಯಾಯಮೂರ್ತಿಯಾಗಿ ನೇಮಿಸಿದ್ದ ಸುಪ್ರೀಂಕೋರ್ಟ್, ಅರ್ಜಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು. ಬಾಲಾಜಿ ಅವರನ್ನು ಇ.ಡಿ ಬಂಧಿಸಿದ್ದನ್ನು ಎತ್ತಿ ಹಿಡಿದು ನ್ಯಾಯಮೂರ್ತಿ ಭರತ ಚಕ್ರವರ್ತಿ ನೀಡಿದ್ದ ತೀರ್ಪಿಗೆ ಸಹಮತ ವ್ಯಕ್ತಪಡಿಸಿ ನ್ಯಾಯಮೂರ್ತಿ ಕಾರ್ತಿಕೇಯನ್ ಇತ್ತೀಚೆಗೆ ತೀರ್ಪು ನೀಡಿದ್ದರು.