ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಹಿರಿಯ ಮುಖಂಡ ಮದನ್ ದಾಸ್ ದೇವಿ (81) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.
ಮಹಾರಾಷ್ಟ್ರ ಮೂಲದವರಾದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮದನ್ ದಾಸ್ ಅವರು ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.
ಪಾರ್ಥೀವ ಶರೀರವನ್ನು ಆರ್ಎಸ್ಎಸ್ ಸ್ಥಳೀಯ ಪ್ರಧಾನ ಕಚೇರಿ ಕೇಶವ ಕೃಪಾದಲ್ಲಿ ಮಧ್ಯಾಹ್ನ 1.30ರಿಂದ 4 ಗಂಟೆಯವರೆಗೆ ದರ್ಶನಕ್ಕೆ ಇರಿಸಲಾಗುವುದು. ಮಂಗಳವಾರ ಪುಣೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾಗೂ ಆರ್ಎಸ್ಎಸ್ನ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಮಟ್ಟದ ಉನ್ನತ ಬಿಜೆಪಿ ನಾಯಕರಲ್ಲಿ ನಾಯಕತ್ವ ಕೌಶಲ್ಯಗಳನ್ನು ಬೆಳೆಸುವ ಜವಾಬ್ದಾರಿಯನ್ನು ಅವರು ಹೊಂದಿದ್ದರು' ಎಂದು ಆರ್ಎಸ್ಎಸ್ ಕಾರ್ಯಕಾರಿ ಹೇಳಿದೆ.
ಮದನ್ ದಾಸ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. 'ಮದನ್ ಅವರು ತಮ್ಮ ಪೂರ್ಣ ಜೀವನವನ್ನು ಆರ್ಎಸ್ಎಸ್ಗಾಗಿ ಮುಡಿಪಿಟ್ಟಿದ್ದರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ, ಅವರನ್ನು ಕಳೆದುಕೊಂಡ ಕುಟುಂಬ ಹಾಗೂ ಕಾರ್ಯಕರ್ತರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ' ಎಂದು ಟ್ವೀಟ್ ಮಾಡಿದ್ದಾರೆ.