ಮುಳ್ಳೇರಿಯ: ಜಗದಗಲದ ತಕ್ಷಣದ ಆಗುಹೋಗುಗಳನ್ನು ನಮ್ಮ ಬೆರಳ ತುದಿಯಲ್ಲಿ ಕಾಣುವಷ್ಟರ ಮಟ್ಟಿಗೆ ಮಾಧ್ಯಮ ರಂಗ ಬೆಳೆದು ನಿಂತಿದ್ದು, ಈ ನಿಟ್ಟಿನಲ್ಲಿ ಮತ್ತಷ್ಟು ಆವಿಷ್ಕಾರಗಳು ನಡೆದುಬರುತ್ತಿರುವುದು ಮಾಧ್ಯಮ ರಂಗದ ಅತಿಶೀಘ್ರ ಬೆಳವಣಿಗೆಗೆ ಸಾಕ್ಷಿಯಾಗಿರುವುದಾಗಿ ಪತ್ರಕರ್ತ ದುರ್ಗಾಪ್ರಸಾದ್ ನಾಯರ್‍ಕೆರೆ ತಿಳಿಸಿದ್ದಾರೆ.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಕಾಸರಗೋಡು ಜಿಲ್ಲಾ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ವತಿಯಿಂದ ಮುಳ್ಳೇರಿಯದ ಗಣೇಶ ಮಂದಿರದಲ್ಲಿ ನಿನ್ನೆ ಜರುಗಿದ ಕನ್ನಡ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕಾ ದಿನಾಚರಣೆ ಸಂದೇಶ ನೀಡಿ ಮಾತನಾಡಿದರು.
ಕನ್ನಡ ಪತ್ರಿಕಾ ರಂಗಕ್ಕೆ ಮಹತ್ತರವಾದ ಇತಿಹಾಸವಿದೆ. ಸಾಮಾಜಿಕ ಜಾಲತಾಣಗಳು ಎಷ್ಟೇ ಪ್ರಭಾವಶಾಲಿಯಾಗಿ ಬೆಳೆದುಬರುತ್ತಿದ್ದರೂ, ಪತ್ರಿಕಾ ರಂಗ ತನ್ನದೇ ಆದ ಛಾಪು ಉಳಿಸಿಕೊಂಡಿದೆ ಎಂದು ತಿಳಿಸಿದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್. ಜಗನ್ನಾಥ ಶೆಟ್ಟಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪತ್ರಿಕಾ ರಂಗ ಪ್ರಬಲ ಮಾಧ್ಯಮಗಳಲ್ಲಿ ಒಂದಾಗಿದ್ದು, ಪತ್ರಿಕಾರಂಗವನ್ನು ದುರ್ಬಲವಾಗದಂತೆ ನೋಡಿಕೊಳ್ಳುವಲ್ಲಿ ಸರ್ಕಾರದ ಪಾತ್ರವೂ ಇದೆ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಬರವುದರ ಜತೆಗೆ ಪತ್ರಿಕೆಗಳಿಗೆ ಸಕಾಲದಲ್ಲಿ ನೆರವು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ), ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಎ.ಆರ್. ಸಉಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಬದಿಯಡ್ಕ ಪೇಟೆಯಲ್ಲಿ ದೀರ್ಘ ಕಾಲದಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ಬಾಲಕೃಷ್ಣ ಪೊಯ್ಯೆಕಂಡ ಅವರನ್ನು ಗೌರವಿಸಲಾಯಿತು. ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹೊರತಂದ ವಿದ್ಯಾವಾಣಿ ಕನ್ನಡ ಹಾಗೂ ಮಲಯಾಳ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವ್ರದ್ಧಿ ಸಂಘದ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆಯಾಗಿ ನೀಡಲಾಯಿತು.
ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಣೇಶ ವತ್ಸ, ಉದ್ಯಮಿ ಗಂಗಾಧರನ್ ನಾಯರ್ ಪಾಡಿ, ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುರುಷೋತ್ತಮ ಪೆರ್ಲ, ಹಿರಿಯ ಪತ್ರಕರ್ತ ಪ್ರಕಾಶ್‍ಮಾಸ್ಟರ್, ಶಾಲಾ ಮುಖ್ಯ ಶಿಕ್ಷಕ ವೇಣುಗೋಪಾಲ್ ಉಪಸ್ಥಿತರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬಾಲಸುಬ್ರಹ್ಮಣ್ಯ ವಂದಿಸಿದರು.