ಕಾಸರಗೋಡು : ಬೇಕಲ ಸನಿಹದ ತ್ರಿಕ್ಕನ್ನಾಡ್ ಕರಾವಳಿಯಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತದಿಂದ ಇಲ್ಲಿನ ಕರಾವಳಿಯ ಜನತೆಗೆ ನಿದ್ದೆಯಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ. ತ್ರಿಕ್ಕನ್ನಾಡ್, ಕೋಟಿಕುಳಂನ ಬಹುತೇಕ ಭೂಪ್ರದೇಶ ಕಡಲ್ಕೊರೆತಕ್ಕೆ ತುತ್ತಾಗಿದ್ದು, ಇಲ್ಲಿನ ಜನತೆ ತಾತ್ಕಾಲಿಕ ತಡೆಗೋಡೆಗಾಗಿ ಜಿಲ್ಲಾಡಳಿತಕ್ಕೆ ಮೊರೆಯಿಟ್ಟಿದೆ.
ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಸಮುದ್ರಕೊರೆತ ಸಂಭವಿಸುತ್ತಿದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಇಲ್ಲಿನ ಮೀನುಗಾರರು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ, ಅದಲುಬದಲಾಗಿ ಆಡಳಿತಕ್ಕೆ ಬರುತ್ತಿರುವ ಸರ್ಕಾರ, ಇಲ್ಲಿನ ಜನತೆಯ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಿಲ್ಲ.
ಶಾಶ್ವತ ತಡೆಗೋಡೆಗಾಗಿ ದೀರ್ಘ ಕಾಲದಿಂದ ಹೋರಾಟ ನಡೆಸುತ್ತಾ ಬಂದಿದ್ದರೂ, ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇಂದು ಕಡಲು ಮತತಷ್ಟು ಪ್ರಕ್ಷುಬ್ಧಗೊಂಡು, ಮೀನುಗಾರಿಕಾ ಸಾಮಗ್ರಿ ದಾಸ್ತಾನಿರಿಸುವ ಕಟ್ಟಡವನ್ನೇ ಭೂಗರ್ಭದೊಳಗೆ ಸೇರಿಸಿಕೊಂಡಿದೆ. ಜತೆಗೆ ನೂರಾರು ತೆಂಗಿನ ಮರಗಳೂ ಸಮುದ್ರಪಾಲಾಗಿದೆ. ಇದರಿಂದ ಕುಪಿತಗೊಂಡ ಮೀನುಗಾರ ಕುಟುಂಬ ಈ ಪ್ರದೇಶದಲ್ಲಿ ರಸ್ತೆಗೆ ಅಡ್ಡ ಮರದ ದಿಮ್ಮಿಗಳನ್ನಿರಿಸಿ ಪ್ರತಿಭಟಿಸಿದೆ. ಆದರೆ, ಪೊಲೀಸರು ಆಗಮಿಸಿ ಮರದ ದಿಮ್ಮಿಗಳನ್ನು ತೆರವುಗೊಳಿಸಿದರೂ, ಎದೆಗುಂದದೆ, ಮೀನುಗಾರಿಕೆಯ ದೋಣಿಗಳನ್ನೇ ತಂದು ರಸ್ತೆ ತಡೆ ನಡೆಸಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರ ಅಳಲು ಆಲಿಸಲು ಮುಂದಾಗಿದೆ.
ತಾತ್ಕಾಲಿಕ ತಡೆಗೋಡೆ ನಿರ್ಮಾಣ:
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಸ್ಥಳಕ್ಕೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದರು. ಕಳೆದ ಹಲವು ವರ್ಷಗಳಿಂದ ತಡೆಗೋಡೆಯಿಲ್ಲದೆ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಸ್ಥಳೀಯ ಮೀನುಗಾರರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು. ತಕ್ಷಣಕ್ಕೆ ಈ ಪ್ರದೇಶದಲ್ಲಿ ತಾತ್ಕಾಳಿಕ ತಡೆಗೋಡೆ ನಿರ್ಮಾಣಕ್ಕೆ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಹೊಸದುರ್ಗ ತಹಸೀಲ್ದಾರ್ ಟಿ.ಕೆ.ಉನ್ನಿಕೃಷ್ಣನ್, ಉದುಮ ಗ್ರಾ.ಪಂ.ಅಧ್ಯಕ್ಷೆ ಪಿ.ಲಕ್ಷ್ಮಿ, ನೀರಾವರಿ ಕಾರ್ಯಪಾಲಕ ಅಭಿಯಂತರ ಶ್ಯಾಮ್ ಕುಮಾರ್, ಬೇಕಲ ಡಿವೈಎಸ್ಪಿ ಸುನೀಲ್ ಕುಮಾರ್, ಅಪಾಯ ವಿಶ್ಲೇಷಕ ಪ್ರೇಮ್ ಜಿ ಪ್ರಕಾಶ್, ಪಂಚಾಯಿತಿ ಕಾರ್ಯದರ್ಶಿ ದೇವದಾಸ್, ಪಂಚಾಯಿತಿ ಸದಸ್ಯರು, ಮೀನುಗಾರರ ಪ್ರತಿನಿಧಿಗಳು ಜಿಲ್ಲಾಧಿಕಾರಿ ಜತೆಗಿದ್ದರು.