ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಜೂನ್‌ವರೆಗೆ ಶೂನ್ಯ ಒಳನುಸುಳುವಿಕೆ ಎಂದು ಕೇಂದ್ರ ಗೃಹ ಸಚಿವಾಲಯ(ಎಂಎಚ್‌ಎ) ಬಹಿರಂಗಪಡಿಸಿದೆ. ಶೂನ್ಯ ಒಳನುಸುಳುವಿಕೆ ಖಚಿತಪಡಿಸಿಕೊಂಡರೆ ಕಣಿವೆಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದ ಭಯೋತ್ಪಾದನೆಗೆ ಬ್ರೇಕ್ ಹಾಕಲು ಸಾಧ್ಯ ಎಂದು ಭದ್ರತಾ ತಜ್ಞರು ಹೇಳಿದ್ದಾರೆ.
ಗಡಿಯಾಚೆಗಿನ ಉಗ್ರಗಾಮಿಗಳು ಕಾಶ್ಮೀರಕ್ಕೆ ನುಸುಳಿ, ಸಂಚುಗಳನ್ನು ರೂಪಿಸಿ ದಾಳಿ ನಡೆಸುವುದರಿಂದ ಭಯೋತ್ಪಾದನೆ ಹೆಚ್ಚುತ್ತಿದೆ. ಈ ವಿದೇಶಿ ಉಗ್ರಗಾಮಿಗಳು, ದಾಳಿ ನಡೆಸಿದ ನಂತರ ನಾಪತ್ತೆಯಾಗುತ್ತಾರೆ ಅಥವಾ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾಗುತ್ತಾರೆ, ಇಲ್ಲವೆ ಎಲ್‌ಒಸಿಯ ಇನ್ನೊಂದು ಬದಿಯಿಂದ ಹಿಂತಿರುಗುತ್ತಾರೆ ಎಂದು ಕರ್ನಲ್(ನಿವೃತ್ತ) ಶಿವ ನಂದನ್ ಸಿಂಗ್ ಅವರು ತಿಳಿಸಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಪ್ರಕಾರ, ಈ ವರ್ಷ ಜೂನ್ 30 ರವರೆಗೆ ಶೂನ್ಯ ಉಗ್ರರ ಒಳನುಸುಳುವಿಕೆಗೆ ಕಾಶ್ಮೀರ ಸಾಕ್ಷಿಯಾಗಿದೆ. 2019 ರಲ್ಲಿ 141 ಒಳನುಸುಳುವಿ ಪ್ರಕರಣಗಳು ವರದಿಯಾಗಿದ್ದು, 2020 ರಲ್ಲಿ 51, 2021 ರಲ್ಲಿ 34 ಮತ್ತು 2022 ರಲ್ಲಿ ಕೇವಲ 14 ಘಟನೆಗಳು ವರದಿಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
1990ರ ನಂತರ ಇದು ಮೊದಲ ಬಾರಿಗೆ ಉಗ್ರರ ಶೂನ್ಯ ನುಸುಳುವಿಕೆ ದಾಖಲಾಗಿದೆ. ಭದ್ರತಾ ಪಡೆಗಳು ಕಾಶ್ಮೀರದ ಒಳಗೆ ಉಗ್ರರು ಶೂನ್ಯ ನುಸುಳುವಿಕೆ ಖಚಿತಪಡಿಸಿಕೊಳ್ಳುವ ಹಂತ ತಲುಪಿದ್ದರೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಪೊಲೀಸ್ ಮುಖ್ಯಸ್ಥ ಎಸ್ಪಿ ವೈದ್ ಅವರು ಹೇಳಿದ್ದಾರೆ.
ಇದರರ್ಥ ನಾವು ಒಂದು ಮೈಲಿಗಲ್ಲು ಸಾಧಿಸಿದ್ದೇವೆ. ಈಗ ಈ ಶೂನ್ಯ ಒಳನುಸುಳುವಿಕೆಯನ್ನು ಮುಂಬರುವ ದಿನಗಳಲ್ಲೂ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಗಡಿಯಲ್ಲಿ ಭದ್ರತೆಯನ್ನು ಕಡಿಮೆ ಮಾಡಬಾರದು. ಬದಲಾಗಿ ಕಟ್ಟೆಚ್ಚರ ಹೆಚ್ಚಿಸಬೇಕು'' ಎಂದು ವೈದ್ ಅವರು ತಿಳಿಸಿದ್ದಾರೆ.