ಮಳೆಗಾಲದಲ್ಲಿ ತುಂಬಾ ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಶೀತ, ಕೆಮ್ಮು. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಮಕ್ಕಳು ಕೆಲವೊಮ್ಮೆ ಮಳೆಯಲ್ಲಿ ನೆನೆಯುತ್ತಾರೆ, ತಂಪಾದ ವಾತಾವರಣ ಈ ಎಲ್ಲಾ ಕಾರಣಗಳಿಂದ ಮಕ್ಕಳಲ್ಲಿ ಶೀತ, ಕೆಮ್ಮಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ಹಾಗಂತ ಅವರಿಗೆ ಆ್ಯಂಟಿಬಯೋಟಿಕ್ ತುಂಬಾ ಕೊಡಬಾರದು, ಅದರ ಬದಲಿಗೆ ಕಷಾಯ, ಮನೆಮದ್ದು ಬಳಸಿ ಕೆಮ್ಮು ಕಡಿಮೆ ಮಾಡಿದರೆ ಒಳ್ಳೆಯದು. ಅದಲ್ಲೂ ಅಮೃತಬಳ್ಳಿ ಆಯುರ್ವೇದಲ್ಲಿ ಹೆಚ್ಚಾಗಿ ಬಳಸಲಾಗುವುದು.ಅಮೃತಬಳ್ಳಿ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಸಂಧಿವಾತದ ಸಮಸ್ಯೆ ಹೋಗಲಾಡಿಸಲು, ಒಟ್ಟು ಮೊತ್ತದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ.
ಮಳೆಗಾಲದಲ್ಲಿ ನೀವು ಅಮೃತಬಳ್ಳಿ ಕಷಾಯ ಮಾಡಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಕೆಮ್ಮು, ಶೀತ ಈ ಬಗೆಯ ಸಮಸ್ಯೆ ಹೋಗಲಾಡಿಸಲು ತುಂಬಾನೇ ಸಹಕಾರಿಯಾಗಿದೆ. ನಾವಿಲ್ಲಿ ಕೆಲ ಅಮೃತ ಬಳ್ಳಿ ಕಷಾಯ ರೆಸಿಪಿ ನೀಡಿದ್ದೇವೆ, ಈ ಕಷಾಯ ನಿಮ್ಮ ಆರೋಗ್ಯ ವೃದ್ಧಿಸಲು ಸಹಕಾರಿ ನೋಡಿ:
ಬೇಕಾಗುವ ಸಾಮಗ್ರಿ
- 3-4 ತುಂಡು ಒಣ ಅಮೃತಬಳ್ಳಿ
- 2 ದೊಡ್ಡಪತ್ರೆ ಬಳ್ಳಿ
- 5-6 ತುಳಸಿ ಎಲೆ
- 1 ಚಮಚ ಜೀರಿಗೆ
- 5-6 ಕಾಳು ಮೆಣಸು
- 1 -2 ಬೆಳ್ಳುಳ್ಳಿ ಎಸಳು
- ಸ್ವಲ್ಪ ಚಿಕ್ಕ ತುಂಡು ಅರಿಶಿಣ
- ಜೇನು
ಮಾಡುವ ವಿಧಾನ
- 2 ಕಪ್ ನೀರಿಗೆ ಈ ಎಲ್ಲಾ ಹಾಕಿ ಕುದಿಸಿ, 2 ಕಪ್ ನೀರು ಒಂದು ಕಪ್‌ಗೆ ಬರುವಷ್ಟು ಕುದಿಸಿ.
- ನಂತರ ಕಷಾಯವನ್ನು ಸೋಸಿ ಅದಕ್ಕೆ ಸ್ವಲ್ಪ ಜೇನು ಹಾಕಿ ಕುಡಿಯಿರಿ.
- ಕಷಾಯ ಕುಡಿಯವ ಹದಕ್ಕೆ ಬಿಸಿ ಇರುವಾಗಲೇ ಕುಡಿಯಿರಿ.
ಅಮೃತ ಬಳ್ಳಿ ಕಷಾಯ 2
ಒಂದು ಚಿಕ್ಕ ತುಂಡು ಅಮೃತಬಳ್ಳಿ
ಸ್ವಲ್ಪ ತುಳಸಿ
ಒಂದು ಚಿಕ್ಕ ತುಂಡು ಚಕ್ಕೆ
2 ಲವಂಗ
ಸ್ವಲ್ಪ ಕಾಳುಮೆಣಸು
ಬೆಳ್ಳುಳ್ಳಿ
ಶುಂಠಿ
ಬೆಲ್ಲ
ಸ್ವಲ್ಪ ಅರಿಶಿಣ
ಮಾಡುವ ವಿಧಾನ
ಇವೆಲ್ಲವನ್ನು ಅರ್ಧ ಲೀಟರ್ ನೀರಿಗೆ ಹಾಕಿ ಕುದಿಸಿ, ನಂತರ ಸೋಸಿ ಬೆಳಗ್ಗೆ ಒಂದು ಲೋಟ, ಮಲಗುವ ಮುನ್ನ ಒಂದು ಲೋಟ ಕುಡಿಯಿರಿ. ಹೀಗೆ ಕುಡಿಯುವುದರಿಂದ
ಕೆಮ್ಮು, ಶೀತ ಬೇಗನೆ ಕಡಿಮೆಯಾಗುವುದು.
ಅಮೃತಬಳ್ಳಿ ಅತಿಯಾಗಿ ಸೇವಿಸಬೇಡಿ
ಅಮೃತಬಳ್ಳಿ ತುಂಬಾನೇ ಆರೋಗ್ಯಕರ, ಆದರೆ ಅತಿಯಾಗಿ ಸೇವಿಸಬೇಡಿ. ಅಮೃತ ಬಳ್ಳಿ ಅಂತಲ್ಲ ಯಾವುದೇ ಔಷಧವನ್ನು ಅತಿಯಾಗಿ ಸೇವಿಸಿದರೆ ಅಡ್ಡಪರಿಣಾಮ ಉಂಟಾಗಿಯೇ ಉಂಟಾಗುವುದು.
ಮಧುಮೇಹವಿದೆಯೇ?
ಅಮೃತಬಳ್ಳಿ ಸೇವನೆಯಿಂದ ದೊಡ್ಡ ಅಡ್ಡಪರಿಣಾಮವೇನೂ ಇಲ್ಲ. ಅಮೃತ ಬಳ್ಳಿಯನ್ನು ಸೇವಿಸಿದಾಗ ಸಕ್ಕರೆಯಂಶ ಕಡಿಮೆಯಾಗುವುದು. ನೀವು ಮಧುಮೇಹಕ್ಕೆ ಔಷಧ ತೆಗೆದುಕೊಂಡಿದ್ದರೆ ಅಮೃತಬಳ್ಳಿ ಕಷಾಯ ಕುಡಿದಾಗ ರಕ್ತದಲ್ಲಿ ಸಕ್ಕರೆಯಂಶ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.