ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಮತ್ತು ದೇರಳಕಟ್ಟೆಯ ಜುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ, ಯೆನೆಪೋಯ ದಂತ ಕಾಲೇಜು ಮತ್ತು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಸಹಯೋಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಮಹಿಳೆಯರ ಉಚಿತ ಆರೋಗ್ಯ ಯೋಗಕ್ಷೇಮ ಶಿಬಿರವನ್ನು ಆಯೋಜಿಸಲಾಗಿದೆ. ಜು. 16 ರಂದು ಭಾನುವಾರ ಬೆಳಿಗ್ಗೆ 9. ರಿಂದ ಮಧ್ಯಾಹ್ನ 1. ರವರೆಗೆ ನಡೆಯುವ ಈ ಶಿಬಿರವನ್ನು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಬೆಳಗಿಸಿ ಚಾಲನೆ ನೀಡಿ ಆಶೀರ್ವಚನ ನೀಡುವರು. ಟ್ರಸ್ಟಿಗಳಾದ, ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸುವರು. ಟ್ರಸ್ಟಿಗಳಾದ ಮುಂಬೈನ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶಿಬಿರ ಉದ್ಘಾಟಿಸುವರು. ಟ್ರಸ್ಟಿ ಶಶಿಧರ ಶೆಟ್ಟಿ ಗ್ರಾಮಚಾವಡಿ, ಯೆನೆಪೋಯ ವೈದ್ಯಕೀಯ ಆಂಕಾಲಜಿ ವಿಭಾಗ ಮುಖ್ಯಸ್ಥ ಡಾ. ರಾಜೇಶ್ ಕೃಷ್ಣ, ಮತ್ತು ಶಿಶು ರಕ್ತವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನೂಷ ಹೆಗ್ಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಶಿಬಿರದಲ್ಲಿ ಎಲ್ಲಾ ಹರೆಯದವರ ದಂತತಪಾಸಣೆ, ಹಲ್ಲುಗಳ ಶುಚೀಕರಣ, ಬಹಳ ಕೆಟ್ಟಿರುವ ಚಿಕಿತ್ಸೆಗೆ ಒಳಪಡದ ಹಲ್ಲುಗಳ ಕೀಳುವಿಕೆ, ಹಲ್ಲುಗಳ ಚಿಕ್ಕ ಚಿಕ್ಕ ತುಂಬಿಸುವಿಕೆ, ಮತ್ತು ಶಿಬಿರಾರ್ಥಿಗಳಿಗೆ ಹಸಿರು ಕಾರ್ಡು ವಿತರಣೆ ನಡೆಯಲಿದೆ. ಹಸಿರು ಕಾರ್ಡ್ ಉಚಿತ ಹಲ್ಲಿನ ಸೆಟ್ ನೀಡುವುದಲ್ಲದೆ ರಿಯಾಯಿತಿ ದರದಲ್ಲಿ ಹಲ್ಲಿನ ಕ್ಲಿಪ್ ಅಳವಡಿಕೆ ಹಾಗೂ ಇತರ ದಂತ ಚಿಕಿತ್ಸೆಗಳನ್ನೂ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ. ಮಹಿಳೆಯರ ವಿವಿಧ ಸಮಸ್ಯೆಗಳ ಬಗ್ಗೆ ಆಧುನಿಕ ಉಪಕರಣಗಳಿಂದ ಪರೀಕ್ಷೆ ಮತ್ತು ಸಲಹೆ ಕೂಡ ನೀಡಲಾಗುತ್ತದೆ. ಬೆಳಿಗ್ಗೆ 8.ರಿಂದ 9À ವರೆಗೆ ಶಿಬಿರದ ನೋಂದಾವಣೆ ನಡೆಯಲಿದೆ. ಶಿಬಿರದಲ್ಲಿ ನೋಂದಾಯಿತರಿಗೆ ಯೆನೆಪೋಯ ಆಸ್ಪತ್ರೆಯಲ್ಲಿ ಅನೇಕ ಚಿಕಿತ್ಸಾ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ಅವಕಾಶವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡಕೊಳ್ಳಬೇಕೆಂದು ಕೊಂಡೆವೂರು ಆಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.