ನವದೆಹಲಿ: ಭವಿಷ್ಯದಲ್ಲಿ ರಾಜಕೀಯ ಕಾರಣಕ್ಕಾಗಿ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಮರಳಿಸುವುದಿಲ್ಲ ಎಂಬುದಾಗಿ ಪ್ರಶಸ್ತಿಗಳನ್ನು ಸ್ವೀಕರಿಸುವವರಿಂದ ದೇಶದ ಸಾಂಸ್ಕೃತಿಕ ಅಕಾಡೆಮಿಗಳು ಪೂರ್ವ ಹೇಳಿಕೆಗಳನ್ನು ಪಡೆಯಬೇಕು ಎಂದು ಸಾರಿಗೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ನವದೆಹಲಿ: ಭವಿಷ್ಯದಲ್ಲಿ ರಾಜಕೀಯ ಕಾರಣಕ್ಕಾಗಿ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಮರಳಿಸುವುದಿಲ್ಲ ಎಂಬುದಾಗಿ ಪ್ರಶಸ್ತಿಗಳನ್ನು ಸ್ವೀಕರಿಸುವವರಿಂದ ದೇಶದ ಸಾಂಸ್ಕೃತಿಕ ಅಕಾಡೆಮಿಗಳು ಪೂರ್ವ ಹೇಳಿಕೆಗಳನ್ನು ಪಡೆಯಬೇಕು ಎಂದು ಸಾರಿಗೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಈ ಸ್ಥಾಯಿ ಸಮಿತಿ ಸಲ್ಲಿಸಿರುವ 'ರಾಷ್ಟ್ರೀಯ ಅಕಾಡೆಮಿಗಳು ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯಶೀಲತೆ' ಕುರಿತ ವರದಿಯ ಭಾಗವಾಗಿ ಈ ಶಿಫಾರಸುಗಳನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಯಿತು.
ಈ ವಿಷಯ ಕುರಿತು ವಿವರಿಸುವಾಗ, ಕರ್ನಾಟಕದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ನಂತರ 39 ಲೇಖಕರು ಸಾಹಿತ್ಯ ಅಕಾಡೆಮಿಗೆ ತಮ್ಮ ಪ್ರಶಸ್ತಿಗಳನ್ನು ಮರಳಿಸಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯವು ಸಂಸದೀಯ ಸಮಿತಿಗೆ ಮಾಹಿತಿ ನೀಡಿತು.
ಕೆಲವು ಲೇಖಕರು ತಮ್ಮ ಫಲಕಗಳನ್ನು ಹಿಂತಿರುಗಿಸಿದರೆ, ಇನ್ನೂ ಕೆಲವರು ಪ್ರಶಸ್ತಿಯ ಮೊತ್ತವನ್ನು ಮರಳಿಸಿದ್ದರು. ಆದಾಗ್ಯೂ, ಪ್ರಶಸ್ತಿ ಪುರಸ್ಕೃತರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸುವ ನಿರ್ಣಯವನ್ನು ಅಕಾಡೆಮಿಯ ಕಾರ್ಯಕಾರಿ ಮಂಡಳಿಯು ಅಂಗೀಕರಿಸಿತ್ತು.
ಒಂದು ವೇಳೆ ರಾಜಕೀಯ ಪ್ರತಿಭಟನೆಯ ಸಂಕೇತವಾಗಿ ಪ್ರಶಸ್ತಿಗಳನ್ನು ಹಿಂತಿರುಗಿಸಿದರೆ, ಭವಿಷ್ಯದಲ್ಲಿ ಅವರನ್ನು ಅಂತಹ ಪ್ರಶಸ್ತಿಗೆ ಪರಿಗಣಿಸಬಾರದು ಎಂದು ಸಮಿತಿಯು ಶಿಫಾರಸು ಮಾಡಿದೆ.
ಅಕಾಡೆಮಿಗಳು ರಾಜಕೀಯೇತರ ಸಂಸ್ಥೆಗಳಾಗಿದ್ದು, ಪ್ರಶಸ್ತಿ ವಾಪಸ್ ಮಾಡುವುದು ದೇಶಕ್ಕೆ ಅವಮಾನಕರ ಎಂದು ವೈಎಸ್‌ಆರ್‌ಸಿಪಿ ಸಂಸದ ವಿಜಯ್ ಸಾಯಿ ರೆಡ್ಡಿ ನೇತೃತ್ವದ ಸಮಿತಿಯು ತಿಳಿಸಿದೆ.
'ಪ್ರಸ್ತಾವಿತ ಪ್ರಶಸ್ತಿ ಪುರಸ್ಕೃತರಿಂದ ಪೂರ್ವ ಹೇಳಿಕೆ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಬಹುದು. ಪ್ರಶಸ್ತಿ ಪುರಸ್ಕೃತರು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಪ್ರಶಸ್ತಿಯನ್ನು ಅವಮಾನಿಸುವಂತಿಲ್ಲ. ಪೂರ್ವ ಹೇಳಿಕೆ ನೀಡದಿದ್ದರೆ ಪ್ರಶಸ್ತಿ ನೀಡುವುದಿಲ್ಲ. ಪ್ರಶಸ್ತಿ ಮರಳಿಸಿದವರನ್ನು ಭವಿಷ್ಯದಲ್ಲಿ ಅಂತಹ ಪ್ರಶಸ್ತಿಗೆ ಪರಿಗಣಿಸಲು ಆಗುವುದಿಲ್ಲ ಎಂಬ ಷರತ್ತುಗಳನ್ನು ವಿಧಿಸಬೇಕು' ಎಂದು ಸಮಿತಿ ಹೇಳಿದೆ.