ರೇವಾ: ಬಕ್ರೀದ್ ಹಬ್ಬದಂದು ಮಧ್ಯಪ್ರದೇಶದ ರೇವಾ ನಗರದ ಪೊಲೀಸ್ ಠಾಣೆಯೊಂದು ವಿಚಿತ್ರ ರೀತಿಯ ವಿವಾದಕ್ಕೆ ಸಾಕ್ಷಿಯಾಯಿತು. ಮೇಕೆ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು, ಮೇಕೆಯೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದರು.
ಎರಡು ವರ್ಷದ ಮೇಕೆ ತಮ್ಮದು ಎಂದು ಸಂಜಯ್ ಖಾನ್ ಮತ್ತು ಶಾರುಖ್ ಖಾನ್ ಹೇಳಿಕೊಂಡ ನಂತರ ಈ ವಿವಾದ ಉಂಟಾಯಿತು. ಬಕ್ರೀದ್ ಆಚರಣೆ ನಂತರ ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವಲ್ಲಿ ವಿಫಲರಾದ ನಂತರ ಪೊಲೀಸರ ಸಹಾಯವನ್ನು ಕೋರಿದರು. ಇಬ್ಬರೂ ತಮ್ಮ ಬಿಳಿ ಮತ್ತು ಕಂದು ಬಣ್ಣದ ಮೇಕೆಯೊಂದಿಗೆ ಸಿವಿಲ್ ಪೊಲೀಸ್ ಠಾಣೆಗೆ ಆಗಮಿಸಿ ಅದರ ಮೇಲೆ ಹಕ್ಕು ಸಾಧಿಸಿದರು ಎಂದು ಇನ್ಸ್ ಪೆಕ್ಟರ್ ಹತೇಂದ್ರ ನಾಥ್ ಶರ್ಮಾ ಹೇಳಿದ್ದಾರೆ.
ತಾನು ಸಾಕಿದ್ದ ಮೇಕೆ ಆರು ತಿಂಗಳಿನಿಂದ ನಾಪತ್ತೆಯಾಗಿತ್ತು ಎಂದು ಸಂಜಯ್ ಖಾನ್ ಹೇಳಿದರೆ, ಬಕ್ರೀದ್ ಗಾಗಿ ಇತ್ತೀಚಿಗೆ 15,000 ರೂ. ನೀಡಿ ಮೇಕೆ ಖರೀದಿಸಿರುವುದಾಗಿ ಶಾರುಖ್ ಖಾನ್ ಹೇಳಿದ್ದಾರೆ. ಇಬ್ಬರಿಗೂ ಸಾಕ್ಷ್ಯ ನೀಡುವಂತೆ ಹೇಳಿದ್ದೇವು. ಮರುದಿನ ಅವರಿಬ್ಬರೂ ವಿವಾದಕ್ಕೆ ಕಾರಣವಾಗಿರುವ ಮೇಕೆಗೆ ಹೋಲುವ ಚಿತ್ರಗಳೊಂದಿಗೆ ಬಂದರು. ಇದು ಪ್ರಕರಣವನ್ನು ಇನ್ನಷ್ಟು ಸಂಕೀರ್ಣಗೊಳಿಸಿತು ಎಂದು ಅಧಿಕಾರಿಗಳು ಹೇಳಿದರು.
ಮೇಕೆಯನ್ನು ಪೊಲೀಸ್ ಠಾಣೆಯಲ್ಲಿ ಇರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಥಳೀಯ ವಾರ್ಡ್ ಕಾರ್ಪೊರೇಟರ್‌ಗೆ ಕರೆ ಮಾಡಿ ಇಬ್ಬರ ನಡುವೆ ರಾಜಿ ಸಂಧಾನ ಮಾಡಿದ್ದೇವೆ ಎಂದು ಅಧಿಕಾರಿ ತಿಳಿಸಿದರು. ಆರು ತಿಂಗಳ ಹಿಂದೆ ಸಂಜಯ್ ಖಾನ್ ಮೇಕೆಯನ್ನು ಕಳೆದುಕೊಂಡಂತೆ ತೋರುತ್ತಿದೆ. ಯಾರೋ ಅದನ್ನು ಶಾರುಖ್ ಖಾನ್ ಗೆ ಮಾರಾಟ ಮಾಡಿದ್ದಾರೆ. ಮೇಕೆಗಳ ಮಾರಾಟ ವೇಳೆ ಯಾರು ಕೂಡಾ ಕಾಗದ ಪತ್ರ ಮಾಡಿಸಲ್ಲ, ಆದ್ದರಿಂದ ಅದರ ಮಾಲೀಕತ್ವವನ್ನು ನಿರ್ಧರಿಸುವುದು ಕಷ್ಟ ಎಂದು ಶರ್ಮಾ ಹೇಳಿದರು.