ನವದೆಹಲಿ: ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಎಂಬ ಭಯೋತ್ಪಾದಕ ಸಂಘಟನೆಯ ಸದಸ್ಯ ಸದ್ದಾಂ ಶೇಖ್ 14 ದಿನಗಳ ಪೊಲೀಸ್ ಕಸ್ಟಡಿಯಲ್ಲಿ ತಾನು ಹಿಂದು ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಠಾಣೆಯ ರಿಮಾಂಡ್‍ನಲ್ಲಿದ್ದ ಸಮಯದಲ್ಲಿ ಶಂಕಿತ ಭಯೋತ್ಪಾದಕ ಸದ್ದಾಂ ತನ್ನನ್ನು ಲಖನೋದ ಗೊಂಡಾ ಜಿಲ್ಲೆಯ ತಾರಾಬ್‍ಗಂಜ್ ಪಟ್ಟಣದ ನಿವಾಸಿ ರಂಜಿತ್ ಸಿಂಗ್ ಎಂದು ಗುರುತಿಸಿಕೊಂಡಿದ್ದ ಎಂದು ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಿಳಿಸಿದೆ.
ಈತ 1999ರಲ್ಲಿ ಇಸ್ಲಾಂಗೆ ಮತಾಂತರಗೊಂಡು ಮುಂಬೈನ ಮುಸ್ಲಿಂ ಕುಟುಂಬದೊಂದಿಗೆ ಸಂಪರ್ಕಕ್ಕೆ ಬಂದ ನಂತರ ಸದ್ದಾಂ ಶೇಖ್ ಆಗಿದ್ದ ವಿಚಾರ ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇಖ್ ಆದ ನಂತರ, ಸದ್ದಾಂ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದನು. ಸದ್ದಾಂ ಶೇಖ್ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದು, 2020ರಲ್ಲಿ ತನ್ನ ಹೆಂಡತಿಯ ಪ್ರೇಮಿ ಮತ್ತು ತನ್ನ ಕುಟುಂಬವನ್ನು ಕೊಲ್ಲಲು ಬಯಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2020 ರಲ್ಲಿ, ಸದ್ದಾಂ ಶೇಖ್ ತೀವ್ರಗಾಮಿ ಉಗ್ರ ಸಂಘಟನೆ ಅಲ್ ಖೈದಾಗೆ ಸೇರಿದನು.
ಸದ್ದಾಂ ತನ್ನ ಫೇಸ್ಬುಕ್ ಪುಟದಲ್ಲಿ ಸಯೀದಾ ಮರಿಯಮ್ ಮಹಿರಾ ಎಂಬ ಕಾಲ್ಪನಿಕ ಹೆಸರಿನಲ್ಲಿ ಜಿಹಾದಿ ವಿಷಯವನ್ನು ಪೋಸ್ಟ್ ಮಾಡುವ ಮೂಲಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಖಾತೆಗಳು ಮತ್ತು ಎಲೆಕ್ಟ್ರಾನಿಕ್ ಕಣ್ಗಾವಲಿನಿಂದಾಗಿ ಸದ್ದಾಂ ಶೇಖ್ ಐಎಂಒ ಮೂಲಕ ಪಾಕಿಸ್ತಾನದ ಉಗ್ರರೊಂದಿಗೆ ಮಾತನಾಡಿದ್ದಾನೆ ಎಂದು ತಿಳಿದುಬಂದಿದ್ದು ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ದಾಂ ತನ್ನನ್ನು ಹಿಜ್ಬುಲ್ ಮುಜಾಹಿದ್ದೀನ್ ಸದ್ದಾಂ ಎಂದು ಐಎಂಒ ಗುಂಪಿನಲ್ಲಿ ಕರೆದುಕೊಂಡಿದ್ದು ಐಎಂಒ, ಫೇಸ್ಬುಕ್ ಮತ್ತು ಯೂಟ್ಯೂಬ್ನಂತಹ ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್‍ಗಳ ಮೂಲಕ ಸಕ್ರೀಯನಾಗಿದ್ದ. ಸದ್ದಾಂ ಶೇಖ್ ಪಾಕಿಸ್ತಾನ ಮತ್ತು ಕಾಶ್ಮೀರದ ಅನೇಕ ಭಯೋತ್ಪಾದಕರೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಅಧಿಕಾರಿಗಳ ಪ್ರಕಾರ, ಸದ್ದಾಂ ಬೆಂಗಳೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಲೋನ್ ವುಲ್ಫ್ ಮಾದರಿಯ ದಾಳಿಗೆ ಟ್ರಕ್ ಬಳಸಲು ಯೋಜಿಸಿದ್ದ ಎನ್ನಲಾಗಿದೆ. 2016ರಲ್ಲಿ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಇದೇ ರೀತಿಯ ದಾಳಿಗಳ ವೀಡಿಯೊಗಳನ್ನು ಬ್ರೌಸ್ ಮಾಡಿದ ನಂತರ ಈ ರೀತಿಯ ದಾಳಿಯ ಕಲ್ಪನೆ ಅವನಿಗೆ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.