ತೌಬಲ್: ಮಣಿಪುರದ ತೌಬಲ್ ಜಿಲ್ಲೆಯ ಭಾರತೀಯ ಮೀಸಲು ಪಡೆ (ಐಆರ್‌ಬಿ) ಶಿಬಿರಕ್ಕೆ ನುಗ್ಗಿ ಶಸ್ತ್ರಾಸ್ತ್ರ ದೋಚಲು ಗುಂಪೊಂದು ಯತ್ನಿಸಿದ್ದು, ಈ ವೇಳೆ ಭದ್ರತಾ ಪಡೆ ಮತ್ತು ಗುಂಪಿನ ನಡುವೆ ಘರ್ಷಣೆ ಉಂಟಾಗಿದೆ.
ಘರ್ಷಣೆಯಲ್ಲಿ 27 ವರ್ಷದ ಯುವಕ ಹತ್ಯೆಯಾಗಿದ್ದು, ಅಸ್ಸಾಂ ರೈಫಲ್ಸ್ ಯೋಧನ ಕಾಲಿಗೆ ಗುಂಡು ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಮಂಗಳವಾರ ಗುಂಪೊಂದು ಖಂಗಾಬೊಕ್ ಪ್ರದೇಶದಲ್ಲಿನ 3ನೇ ಬೆಟಾಲಿಯನ್ ಶಿಬಿರಕ್ಕೆ ನುಗ್ಗಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ದೋಚಲು ಪ್ರಯತ್ನಿಸಿತ್ತು. ಈ ವೇಳೆ ನಮ್ಮ(ಭದ್ರತಾ ಪಡೆ) ಮತ್ತು ಗುಂಪಿನ ನಡುವೆ ಘರ್ಷಣೆ ಉಂಟಾಗಿದೆ. ಪರಿಸ್ಥಿತಿ ಹತೋಟಿಗೆ ತರುವ ಉದ್ದೇಶದಿಂದ ಗುಂಪಿನ ಮೇಲೆ ಅಶ್ರುವಾಯು, ರಬ್ಬರ್ ಗುಂಡುಗಳನ್ನು ಹಾರಿಸಿದೆವು. ಇದರಿಂದ ಆಕ್ರೋಶಗೊಂಡ ಗುಂಪು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿತು. ಇದರಿಂದ ಘರ್ಷಣೆ ತಾರಕ್ಕೇರಿತು' ಎಂದು ಭದ್ರತಾ ಪಡೆಯ ಅಧಿಕಾರಿಯೊಬ್ಬರು ತಿಳಿದ್ದಾರೆ.
'ಭದ್ರತಾ ಪಡೆಗಳು ಸ್ಥಳಕ್ಕೆ ತಲುಪುವುದನ್ನು ತಡೆಯಲು ಶಿಬಿರಕ್ಕೆ ತೆರಳುವ ರಸ್ತೆಗಳನ್ನು ಈ ಗುಂಪು ನಿರ್ಬಂಧಿಸಿತ್ತು. ಶಿಬಿರಕ್ಕೆ ತೆರಳುತ್ತಿದ್ದ ಅಸ್ಸಾಂ ರೈಫಲ್ಸ್ ತಂಡದ ಮೇಲೆಯೂ ದಾಳಿ ಮಾಡಿದೆ. ಈ ವೇಳೆ ಸಿಬ್ಬಂದಿಯೊಬ್ಬರ ಕಾಲಿಗೆ ಗುಂಡು ತಾಕಿದೆ. ಸೇನಾ ವಾಹನವನ್ನು ಸುಟ್ಟು ಹಾಕಿದ್ದಾರೆ' ಎಂದು ಹೇಳಿದರು.
'ಘರ್ಷಣೆಯಲ್ಲಿ ರೊನಾಲ್ಡೊ ಎಂಬ ವ್ಯಕ್ತಿಗೆ ಗುಂಡು ತಾಕಿದೆ. ಮೊದಲಿಗೆ ಆ ವ್ಯಕ್ತಿಯನ್ನು ತೌಬಲ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಇಂಫಾಲ್‌ನ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಯಿತು. ಆಸ್ಪತ್ರೆಗೆ ತೆರಳುವ ಮಾರ್ಗದ ಮಧ್ಯೆ ವ್ಯಕ್ತಿ ಮೃತಪಟ್ಟಿದ್ದಾನೆ' ಎಂದು ಅಧಿಕಾರಿಗಳು ತಿಳಿಸಿದರು.
ಘರ್ಷಣೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.