ಗುಜರಾತ್ ವಿಶ್ವವಿದ್ಯಾಲಯ ಈ ಇಬ್ಬರ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಜುಲೈ 13ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಈ ಇಬ್ಬರಿಗೂ ಹಿಂದಿನ ವಿಚಾರಣೆಯಲ್ಲಿ ಸೂಚಿಸಿತ್ತು. ಗುರುವಾರ ಇಬ್ಬರೂ ಗೈರಾಗಿದ್ದರು. ನವದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಇವರ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿಕೊಂಡರು.
ಎಎಪಿ ನಾಯಕರ ಪರ ವಕೀಲರು ಸಲ್ಲಿಸಿದ ಈ ಮನವಿಗೆ ಗುಜರಾತ್ ವಿಶ್ವವಿದ್ಯಾಲಯದ ಪರ ವಕಾಲತ್ತು ವಹಿಸಿರುವ ವಕೀಲ ಅಮಿತ್ ನಾಯರ್ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೆ ವಿಚಾರಣೆ ಪ್ರಕ್ರಿಯೆ ವಿಳಂಬವಾಗುವುದನ್ನು ತಪ್ಪಿಸಲು ಮುಂದಿನ ವಿಚಾರಣೆಗೆ ಖುದ್ದು ಹಾಜರಿಗೆ ಸೂಚಿಸಬೇಕು ಎಂದು ನ್ಯಾಯಾಧೀಶರನ್ನು ಕೋರಿದರು.
ಈ ಮನವಿ ಪರಿಗಣಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಜೆ.ಪಾಂಚಾಲ್, ಜುಲೈ 26ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಕರಣವೊಂದಿರುವುದರಿಂದ ವಿಚಾರಣೆಯನ್ನು ಮುಂದೂಡಬೇಕು ಎಂದು ಎಎಪಿ ನಾಯಕರ ಪರ ವಕೀಲರು ಮನವಿ ಮಾಡಿಕೊಂಡರು. ಈ ಪ್ರಕರಣಕ್ಕೂ, ಅದಕ್ಕೂ ಸಂಬಂಧವಿಲ್ಲ ಎಂದು ಗುಜರಾತ್ ವಿ.ವಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಕೇಜ್ರಿವಾಲ್ ಹಾಗೂ ಸಿಂಗ್ ಪರ ವಕೀಲರು ತಮ್ಮ ಮನವಿ ಹಿಂತೆಗೆದುಕೊಂಡರು.
ಪ್ರಕರಣ ಏನು?
'ಗುಜರಾತ್ ವಿಶ್ವವಿದ್ಯಾಲಯ ಮೋದಿಗೆ ನಿಜವಾಗಿಯೂ ಪದವಿ ನೀಡಿದ್ದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಅದನ್ನು ಯಾಕೆ ನೀಡುತ್ತಿಲ್ಲ? ಯಾಕೆಂದರೆ ಅದು ನಕಲಿ. ದೆಹಲಿ ಮತ್ತು ಗುಜರಾತ್ ವಿಶ್ವವಿದ್ಯಾಲಯಗಳಲ್ಲಿ ಪ್ರಧಾನಿ ವ್ಯಾಸಂಗ ಮಾಡಿದ್ದಲ್ಲಿ, ನಮ್ಮ ಹಳೆಯ ವಿದ್ಯಾರ್ಥಿಯೊಬ್ಬ ದೇಶದ ಪ್ರಧಾನಿಯಾಗಿದ್ದಾರೆ ಎಂದು ವಿಶ್ವವಿದ್ಯಾಲಯಗಳು ಹೇಳಿಕೊಂಡು ಸಂಭ್ರಮಿಸುತ್ತಿದ್ದವು...' ಎಂಬುದು ಸೇರಿದಂತೆ ವ್ಯಂಗ್ಯಭರಿತವಾಗಿ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಪತ್ರಿಕಾಗೋಷ್ಠಿ ಹಾಗೂ ತಮ್ಮ ಟ್ವಿಟರ್ ಖಾತೆಯಲ್ಲಿ ಇಂತಹ ಹಲವು ಹೇಳಿಕೆ ಉಲ್ಲೇಖಿಸಿದ್ದರು.
ಇವರಿಬ್ಬರ ಹೇಳಿಕೆಗಳು ಗುಜರಾತ್ ವಿಶ್ವವಿದ್ಯಾಲಯದ ಹೆಸರು ಕೆಡಿಸುವ ಉದ್ದೇಶ ಹೊಂದಿವೆ. ಇದರೊಟ್ಟಿಗೆ ಮಾನನಷ್ಟಕ್ಕೂ ಕಾರಣವಾಗಿವೆ ಎಂದು ವಿ.ವಿ.ಯ ಕುಲಸಚಿವ ಪಿಯೂಷ್ ಪಟೇಲ್ ದೂರು ನೀಡಿದ್ದರು.