ಬದಿಯಡ್ಕ: ಕಳೆದ ಒಂದು ವಾರಗಳಿಂದ ಸುರಿದ ಧಾರಾಕಾರ ಮಳೆಗೆ ನೀರ್ಚಾಲು ಮದಕ್ಕವು ತುಂಬಿ ತುಳುಕುತ್ತಿದ್ದು, ಸೋಮವಾರ ಬಾಗಿನ ಸಮರ್ಪಿಸಲಾಯಿತು. ಇತಿಹಾಸ ಪರಂಪರೆಯುಳ್ಳ ನೀರ್ಚಾಲು ಮದಕ್ಕವನ್ನು 2016ರಲ್ಲಿ ಅಂದಿನ ಕೃಷಿ ಸಚಿವರ ಒಂದು ಕೋಟಿ ಅನುದಾನದಲ್ಲಿ ಸಹಸ್ರ ಸರೋವರ ಯೋಜನೆ ರೂಪೀಕರಿಸಿ ಅಭಿವೃದ್ಧಿಪಡಿಸಲಾಗಿತ್ತು.
ಈ ವರ್ಷ ಬರಗಾಲದಿಂದ ಜಲಕ್ಷಾಮವು ಪ್ರತಿಯೊಬ್ಬರಿಗೂ ಜಲ ಅಮೂಲ್ಯವಾದುದು, ಜಲವೇ ಜೀವಾಣು, ಜಲಸಂರಕ್ಷಣೆ, ಜಲ ಉಪಯೋಗ ಹಾಗೂ ಜಲದುರ್ಬಳೆಕೆಯ ಬಗ್ಗೆ ಜಾಗೃತಿಯೊಂದಿಗೆ ನೀರಿನ ಬೆಲೆ ಅರಿಯುವಂತಾಗಿದೆ. ಜಲಮರುಪೂರಣದೊಂದಿಗೆ ಅಂತರ್ಜಲ ವೃದ್ಧಿಸುವ ಕಾರ್ಯಕೈಗೊಂಡರೆ ಬೇಸಿಗೆ ಕಾಲದ ಜಲಕ್ಷಾಮಕ್ಕೆ ಪರಿಹಾರ ಕಾಣಬಹುದು. ನೀರ್ಚಾಲು ಮದಕದಲ್ಲಿ ನಡೆದ ಸರಳಸಮಾರಂಭದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಬಿ.ಶಾಂತಾ ಬಾಗಿನ ಅರ್ಪಿಸಿದರು. ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ನೀರ್ಚಾಲು, ವಾರ್ಡು ಸದಸ್ಯೆ ಸ್ವಪ್ನ, ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ, ಶ್ಯಾಮ ಭಟ್ ಏವುಂಜೆ, ನಾರಾಯಣ ಮಣಿಯಾಣಿ, ಗಣೇಶ ನೀರ್ಚಾಲು, ಸುಬ್ರಹ್ಮಣ್ಯ ಆಚಾರ್ಯ, ಬಿ.ಕೆ.ಟೈಲರ್, ರಮಣಿ ಶುಭಾಶಂಸನೆಗೈದರು. ಎಂ.ಎಚ್.ಜನಾರ್ಧನ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಬಾಲಕೃಷ್ಣ ನಾಯ್ಕ ನೀರ್ಚಾಲು ವಂದಿಸಿದರು.
ಊರ ಜನಪ್ರೇಮಿಗಳೆಲ್ಲ ಒಂದಾಗಿ ಬಾಗಿನ ಅರ್ಪಿಸುವುದರೊಂದಿಗೆ ಜಲಪೂಜನ ಕಾರ್ಯ ಜರಗಿತು.