ನವದೆಹಲಿ: ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ವಿವಾದಿತ ಸ್ವಾಮೀಜಿ ಯತಿ ನರಸಿಂಘಾನಂದ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ವಿವಾದಿತ ಸ್ವಾಮೀಜಿ ಯತಿ ನರಸಿಂಘಾನಂದ ಅವರಿಗೆ ನೋಟಿಸ್ ಜಾರಿ ಮಾಡಿದೆ.
ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾದ ಬಳಿಕ ಸ್ವಾಮೀಜಿ ಆಕ್ಷೇಪಾರ್ಹವಾದ ಹೇಳಿಕೆಯನ್ನು ನೀಡಿದ್ದರು.
ಇದಕ್ಕೂ ಮುನ್ನ ಅರ್ಜಿದಾರರಾದ ಶಾಚಿ ನೆಲ್ಲಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ನಿತ್ಯಾ ರಾಮಕೃಷ್ಣನ್ ಅವರು, ನಿಂದನೆ ಮೊಕದ್ದಮೆ ದಾಖಲಿಸಲು ಅಟಾರ್ನಿ ಜನರಲ್ ಅವರ ಸಮ್ಮತಿ ಪಡೆಯಲಾಗಿದೆ ಎಂಬುದನ್ನು ಪೀಠದ ಗಮನಕ್ಕೆ ತಂದರು.
'ಸ್ವಾಮೀಜಿ ಅವರ ಹೇಳಿಕೆಯು ಸುಪ್ರೀಂ ಕೋರ್ಟ್‌ನ ಘನತೆಗೆ ಧಕ್ಕೆ ತರುವಂತಹದ್ದಾಗಿದೆ' ಎಂದು ವಾದಿಸಿದ್ದರು. 'ಸುಪ್ರೀಂ ಕೋರ್ಟ್‌ನ ಘನತೆಗೆ ಧಕ್ಕೆ ತರುವ ಯಾವುದೇ ಯತ್ನ, ಜನತೆ ಇಂತಹ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆಗೆ ಪೆಟ್ಟುನೀಡಲಿದೆ. ಸ್ವಾಮೀಜಿ ಅವರ ಹೇಳಿಕೆಯು ಇತಿಹಾಸದಲ್ಲಿಯೇ ಅತಿ ನಿಂದನಾತ್ಮಕವಾದುದಾಗಿದೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ನರಸಿಂಘಾನಂದ ಅವರು ಗಾಜಿಯಾಬಾದ್‌ನ ಡಸ್ನಾ ದೇಗುಲದ ಮುಖ್ಯ ಅರ್ಚಕರಾಗಿದ್ದಾರೆ. ಹರಿದ್ವಾರ ಧರ್ಮ ಸಂಸತ್‌ನಲ್ಲಿ ಮಾಡಿದ್ದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದರು.