ಬೆಂಗಳೂರು: ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವ ಬಗ್ಗೆ ಹಾಗೂ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಅವರು ಗುರುವಾರ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದರು.
ಮೋದಿ ಅವರು ಭೀಕರವಾದ ಮಣಿಪುರ ಹಿಂಸಾಚಾರದ ಬಗ್ಗೆ 79 ದಿನಗಳ ನಂತರ ತಡವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕವಾಗಿ ಆಕ್ರೋಶಭರಿತ ಚರ್ಚೆಯಾಗುತ್ತಿದೆ.
ಇನ್ನೊಂದೆಡೆ ಕೋಲ್ಕತ್ತ ಮೂಲದ ಇಂಗ್ಲಿಷ್ ದೈನಿಕ 'ದಿ ಟೆಲಿಗ್ರಾಫ್' ಪತ್ರಿಕೆ ಇದೇ ವಿಚಾರವಾಗಿ ಪ್ರಧಾನಿ ಮೋದಿ ಅವರ ಹೆಸರು ಉಲ್ಲೇಖಿಸದೇ ಮೊಸಳೆಗೆ ಹೋಲಿಸಿ ಜುಲೈ 21 ರಂದು ಮುಖಪುಟದ ಸುದ್ದಿ ಪ್ರಕಟಿಸಿದೆ.
'ನೋವು ಮತ್ತು ಅವಮಾನ, 56 ಇಂಚಿನ ಎದೆ ನಾಟಲು 79 ದಿನಗಳನ್ನು ತೆಗೆದುಕೊಂಡಿತು' ಎಂದು ಒಂದೇ ಸಾಲನ್ನು ಮುಖಪುಟದಲ್ಲಿ ಮೊಸಳೆಗಳ ಚಿತ್ರದೊಂದಿಗೆ ಸೇರಿಸಿದೆ. 79 ಮೊಸಳೆಗಳ ಚಿತ್ರವನ್ನು ಹಾಕಿ ಕೊನೆಗೆ 79 ನೇ ಚಿತ್ರದಲ್ಲಿ ಕಣ್ಣೀರನ್ನು ತೋರಿಸಲಾಗಿದೆ. ಕಣ್ಣೀರು ಹಾಕುತ್ತಿರುವ ಮೊಸಳೆ ಚಿತ್ರವನ್ನು ಮೇಲೆ ದೊಡ್ಡದಾಗಿ ಪ್ರಕಟಿಸಲಾಗಿದೆ.
ಈ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು ಇಂದು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಅಲ್ಲದೇ ಈಶಾನ್ಯ ರಾಜ್ಯಗಳಲ್ಲಿ 'ದಿ ಟೆಲಿಗ್ರಾಫ್' ಪತ್ರಿಕೆ ಮುಖಪುಟ ವೈರಲ್ ಆಗಿದೆ. ಆ ಪತ್ರಿಕೆ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ನಿರ್ಲಕ್ಷ್ಯ ವಹಿಸಿದ್ದರು ಎಂದು ಇದೇ ದಿನ ಸಂಪಾದಕೀಯ ಬರೆದಿದೆ.
ಅನೇಕರು ಈ ಮುಖಪುಟವನ್ನು ಹಂಚಿಕೊಂಡು ಮಣಿಪುರ ಹಿಂಸೆ ಬಗ್ಗೆ ಪ್ರಧಾನಿ ಮೋದಿ ಅವರ ನಡೆಯನ್ನು ಖಂಡಿಸಿದ್ದಾರೆ. ಇನ್ನೂ ಕೆಲವರು ದೇಶದ ಪ್ರಧಾನಿಯನ್ನು ಮೊಸಳೆಗೆ ಹೋಲಿಸಿರುವುದು ಅವಮಾನಕರ ಎಂದು ಚರ್ಚಿಸಿದ್ದಾರೆ.
ದೇಶದ ಪ್ರಮುಖ ಆಂಗ್ಲ ದೈನಿಕಗಳಲ್ಲಿ ಒಂದಾಗಿರುವ ಟೆಲಿಗ್ರಾಫ್, ಆನಂದ ಬಜಾರ್ ಪತ್ರಿಕಾ (ABP) ಸಮೂಹಕ್ಕೆ ಸೇರಿದೆ. ಜುಲೈ 7, 1982 ರಲ್ಲಿ ಆರಂಭವಾಗಿದೆ.
ಮಹಿಳೆಯರನ್ನು ವಿವಸ್ತ್ರಗೊಳಿಸಿದ ಪ್ರಕರಣ ಉಲ್ಲೇಖಿಸಿ ಮೋದಿ ಅವರು, 'ಹೀಗೆ ಮಾಡಿದ ಯಾರನ್ನೂ ಸುಮ್ಮನೇ ಬಿಡುವುದಿಲ್ಲ' ಎಂದು ಗುರುವಾರ ಗುಡುಗಿದ್ದರು.
ಜಾತಿ ಸಂಘರ್ಷ ಕಾರಣದಿಂದ ಮೇ 3 ರಂದು ಎರಡು ಸಮುದಾಯಗಳಲ್ಲಿ ಆರಂಭವಾಗಿರುವ ಹಿಂಸಾಚಾರದಲ್ಲಿ ಇದುವರೆಗೆ 142 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ-ಪಾಸ್ತಿ ನಷ್ಟವುಂಟಾಗಿದೆ. ಅನೇಕರು ಗಾಯಗೊಂಡು ನರಳುತ್ತಿದ್ದಾರೆ.