HEALTH TIPS

ಮಣಿಪುರ ಕುರಿತು ಚರ್ಚೆಗೆ ಸರ್ಕಾರ ಸಿದ್ಧ; ವಿಪಕ್ಷಗಳ ಗದ್ದಲದ ನಡುವೆ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

            ನವದೆಹಲಿ: ಮಣಿಪುರದ ಪರಿಸ್ಥಿತಿ ಕುರಿತು ಸದನದಲ್ಲಿ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರ ಗದ್ದಲದ ನಡುವೆಯೇ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ಗುರುವಾರ ದಿನದ ಮಟ್ಟಿಗೆ ಮುಂದೂಡಲಾಯಿತು.

                ಮಧ್ಯಾಹ್ನ 2 ಗಂಟೆಗೆ ಲೋಕಸಭೆಯ ಕಲಾಪ ಆರಂಭವಾಗುತ್ತಲೇ ಪ್ರತಿಪಕ್ಷಗಳ ನಾಯಕರು ‘ಮಣಿಪುರ ಮಣಿಪುರ’ ಮತ್ತು ‘ಮಣಿಪುರ ಹೊತ್ತಿ ಉರಿಯುತ್ತಿದೆ’ ಎಂಬ ಘೋಷಣೆಗಳನ್ನು ಕೂಗಿದರು. 


                    ಈ ಗದ್ದಲದ ನಡುವೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸಂಸತ್ತಿನ ಉಭಯ ಸದನಗಳಲ್ಲಿ ಮಣಿಪುರದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.

             ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್ ಕೂಡ ಇದೇ ಭರವಸೆ ನೀಡಿದ್ದಾರೆ. 'ಮಣಿಪುರದ ಕುರಿತು ಉಭಯ ಸದನಗಳಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಮಣಿಪುರ ಒಂದು ಸೂಕ್ಷ್ಮ ವಿಷಯ. ಗೃಹ ಸಚಿವರು ಈ ಚರ್ಚೆಗೆ ವಿವರವಾಗಿ ಉತ್ತರ ನೀಡಲಿದ್ದಾರೆ. ಸಭಾಧ್ಯಕ್ಷರು ಚರ್ಚೆಯ ದಿನಾಂಕವನ್ನು ನಿರ್ಧರಿಸಲಿ' ಎಂದು ಜೋಶಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

              ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಲೇ ಇದ್ದಾಗ, ಕಲಾಪಗಳ ಅಧ್ಯಕ್ಷತೆ ವಹಿಸಿದ್ದ ಕಿರಿತ್ ಸೋಲಂಕಿ ಅವರು ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಿದರು.

                               ರಾಜ್ಯಸಭೆಯೂ ದಿನದ ಮಟ್ಟಿಗೆ ಮುಂದೂಡಿಕೆ

              ಮತ್ತೊಂದೆಡೆ, ಪ್ರತಿಪಕ್ಷಗಳ ನಿರಂತರ ಘೋಷಣೆಯಿಂದಾಗಿ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.

               ಮಣಿಪುರ ಹೊತ್ತಿ ಉರಿಯುತ್ತಿದೆ, ಮಹಿಳೆಯರ ಮೇಲೆ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಮಾಡಲಾಗುತ್ತಿದ್ದು, ಮೌನ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಸಂಸತ್ತಿನ ಹೊರಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

            ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿರುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಖರ್ಗೆ ಉಲ್ಲೇಖಿಸಿದರು. 

               ಕಲಾಪಕ್ಕೂ ಮುನ್ನ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ಘಟನೆಯು 140 ಕೋಟಿ ಭಾರತೀಯರು ನಾಚಿಕೆ ಪಡುವಂತದ್ದು. ಕಾನೂನು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತದೆ ಮತ್ತು ಘಟನೆಯಲ್ಲಿನ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಹೇಳಿದರು. 

                  ಯಾವುದೇ ನಾಗರಿಕ ಸಮಾಜಕ್ಕೆ ಈ ಘಟನೆ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ ಪ್ರಧಾನಿ, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು. 

                       ಬೆಳಗ್ಗೆಯೂ ಉಭಯ ಸದನಗಳ ಕಲಾಪ ಮುಂದೂಡಿಕೆ

               ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭವಾಯಿತು. ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ, ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಲೋಕಸಭಾ ಕಲಾಪವನ್ನು ಇಂದು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿತ್ತು.

                ಮತ್ತೊಂದೆಡೆ ಮಣಿಪುರ ಹಿಂಸಾಚಾರದ ಕುರಿತು ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದ ಬೆನ್ನಲ್ಲೇ ರಾಜ್ಯಸಭೆಯ ಕಲಾಪವನ್ನೂ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries