ಕಾಸರಗೋಡು: ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾಯನ್ನು ಶೀಘ್ರ ಪೂರ್ತಿಗೊಳಿಸಲು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಗತಿಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾಸರಗೋಡಿನಲ್ಲಿ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಕಾಲೇಜಿನ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲನೆಗೆ ಪ್ರತಿ ತಿಂಗಳು ಸಭೆ ನಡೆಸಲಾಗುವುದು. ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಪರಿಶೀಲನೆ ನಡೆಸಲಾಗುವುದು.
ಶೈಕ್ಷಣಿಕ ಬ್ಲಾಕ್ ನಿರ್ಮಾಣ ಪೂರ್ಣಗೊಂಡಿದ್ದು, ಶಾಸಕರ ನಿಧಿ ಬಳಸಿ ಇಲ್ಲಿಗೆ ತಾತ್ಕಾಲಿಕವಾಗಿ ಎಚ್‍ಟಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲು ಸಭೆ ನಿರ್ಧರಿಸಿತು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಒದಗಿಸಲಾದ 8 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಕೇರಳ ಜಲ ಪ್ರಾಧಿಕಾರ ವೈದ್ಯಕೀಯ ಕಾಲೇಜಿಗೆ ಕುಡಿಯುವ ನೀರುವಿತರಣಾ ಯೋಜನೆ ಪ್ರಗತಿಯಲ್ಲಿದ್ದು, ಕೇರಳ ಜಲ ಪ್ರಾಧಿಕಾರದ ನೀರು ಸರಬರಾಜು ಯೋಜನೆಯನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಕಾಲೇಜಿಗೆ ಹೊಂದಿಕೊಂಡು ನಿರ್ಮಾಣವಾಗಲಿರುವ ಬಾಲಕಿಯರ ಹಾಸ್ಟೆಲ್ ಹಾಗೂ ಶಿಕ್ಷಕರ ವಸತಿ ನಿಲಯದ ಕಾಮಗಾರಿ ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿದೆ.
500 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕಾರ್ಯ ಪೂರ್ಣಗೊಳಿಸಲು ಆರ್ಥಿಕ ಅನುಮೋದನೆ ಪಡೆಯಲಾಗುವುದು. ವೈದ್ಯಕೀಯ ಕಾಲೇಜಿಗೆ ಕೆಐಎಫ್‍ಬಿ(ಕಿಫ್‍ಬಿ)ವತಿಯಿಂದ 162 ಕೋಟಿ ರೂ. ಮೀಸಲಿರಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್, ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಭಾರ ಅಧೀಕ್ಷಕ ಡಾ.ಆರ್.ಪ್ರವೀಣ್, ಹಣಕಾಸು ಅಧಿಕಾರಿ ಡಾ.ಶಿವಪ್ರಕಾಶ್ ನಾಯರ್, ಕಿಟ್ಕೊ ಸಲಹೆಗಾರ ಟಾಮ್ ಜೋಸ್, ಪ್ರಾಜೆಕ್ಟ್ ಎಂಜಿನಿಯರ್‍ಗಳಾದ ವಿ.ನಿತಿನ್, ಆನಂದ್, ಕಾರ್ಯದರ್ಶಿ ಪ್ರಕಾಶ್ ಜೋಸೆಫ್, ಜೂನಿಯರ್ ಅಧೀಕ್ಷಕ ಎನ್. ಜೆ.ಸಿರಿಯಾಕ್, ನಸಿರ್ಂಗ್ ಸೂಪರಿಂಟೆಂಡೆಂಟ್ ಸಿಂಧು, ಜಿಶಾ ಮತ್ತಿತರರು ಉಪಸ್ಥಿತರಿದ್ದರು. ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಣಕಾರ್ಯದಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ 'ಸಮರಸ ಸುದ್ದಿ' ಆಗಾಗ ವಿಶೇಷ ವರದಿಗಳ ಮೂಲಕ ಸರ್ಕಾರದ ಗಮನಸೆಳೆಯುತ್ತಾ ಬಂದಿದೆ.