ಕಾಸರಗೋಡು: ಮಡಿಕೈ ಗ್ರಾಮ ಪಂಚಾಯತ್ ಸಿಡಿಎಸ್ ವತಿಯಿಂದ ಮಡಿಕೈನ ವೊಕೇಶನಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ಗ್ರಾಮ ರುಚಿ' ಹಲಸು ಮಹೋತ್ಸವ ನಡೆಯಿತು. ಕುಟುಂಬಶ್ರೀಯ 250 ನೆರೆಕರೆ ಗುಂಪುಗಳ ಮೂಲಕ 75 ಕ್ಕೂ ಹೆಚ್ಚು ವಿಧದ ಹಲಸಿನ ಖಾದ್ಯಗಳನ್ನು ತಯಾರಿಸಿ ಇವುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ನಡೆಯಿತು.
ಹಲಸಿನ ಹಣ್ಣಿನ ಮಿಶ್ರಣ, ಲಾಡು, ಹಲಸಿನ ಹಣ್ಣಿನ ಕೇಕ್, ಹಲಸಿನ ಬಿರಿಯಾನಿ, ಹಲಸಿನ ಉಪ್ಪಿನಕಾಯಿ, ಹಲಸು ರೋಸ್ಟ್, ಹಲಸು ಉಣ್ಣಿಯಪ್ಪ, ಪಾಯಸ, ಹಲಸಿನ ಮೂಡೆ, ಹಲಸಿನ ಕಟ್‍ಲೆಟ್, ಹಲಸಿನ ಬೀಜದ ಜ್ಯೂಸ್ ಸೇರಿದಂತೆ ನಾನಾ ವಿಧದ ಖಾದ್ಯಗಳ ಪ್ರದರ್ಶನದೊಂದಿಗೆ ಮಾರಾಟ ನಡೆಸಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಹಲಸು ಮಹೋತ್ಸವವನ್ನು ಉದ್ಘಾಟಿಸಿದರು. ನಂತರ 2023ನೇ ಸಾಲಿನ ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಚಲನಚಿತ್ರ ನಟ ಸುಧೀಶ್ ಸುಧಿ ಮುಖ್ಯ ಅತಿಥಿಯಾಗಿದ್ದರು. ಉಪಾಧ್ಯಕ್ಷ ವಿ.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರಾಜನ್, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸತ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರಮಾ ಪದ್ಮನಾಭನ್, ವಿ.ಬಾಲನ್, ಕೆ.ನಾರಾಯಣನ್, ಶಶೀಂದ್ರನ್ ಮಡಿಕೈ ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ರೀನಾ ಸ್ವಾಗತಿಸಿದರು. ಪಂಚಾಯತ್ ಕಾರ್ಯದರ್ಶಿ ದಿನೇಶ ಪರಾಯಿಲ್ ವಂದಿಸಿದರು.