ತಿರುವನಂತಪುರ: ಈ ತಿಂಗಳೂ ಕೆಎಸ್‍ಆರ್‍ಟಿಸಿ ನೌಕರರು ವೇತನ ವಿತರಣೆಯಾಗದೆ ಸಂಕಷ್ಟದಲ್ಲಿದ್ದಾರೆ. ವೇತನ ವಿತರಣೆ ಇನ್ನಷ್ಟು ವಿಳಂಬವಾಗಲಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರ ನೀಡಬೇಕಿದ್ದ ಹಣ ಇನ್ನೂ ಕೈಸೇರಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ವೇತನವನ್ನು ಕಂತುಗಳಲ್ಲಿ ಪಾವತಿಸಲು ನಿರ್ಧರಿಸಲಾಯಿತು. ಆದರೆ, ಭರವಸೆ ಈಡೇರಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಮೊದಲ ಕಂತು ಪಾವತಿಸುವುದಾಗಿ ಪೊಳ್ಳು ಭರವಸೆ ನೀಡಲಾಗಿತ್ತು. ಜುಲೈ 7 ಕಳೆದರೂ ಮೊದಲ ಕಂತಿನ ಹಣ ಪಾವತಿಯಾಗಿಲ್ಲ.
ಸರ್ಕಾರ ನಿಗಮಕ್ಕೆ ತಲಾ 50 ಕೋಟಿ ರೂಪಾಯಿ ನೆರವು ನೀಡುತ್ತಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಇದನ್ನು 30 ಕೋಟಿಗೆ ಇಳಿಸಲಾಗಿದೆ. ಈ ಮೊತ್ತಕ್ಕೆ ಅನುಮತಿ ನೀಡಲು ಹಣಕಾಸು ಇಲಾಖೆಯಲ್ಲಿ ಕಡತ ಪ್ರಕ್ರಿಯೆ ಆರಂಭಗೊಂಡಿದ್ದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ವರದಿಯಾಗಿದೆ. ಇಂದು ಮತ್ತು ನಾಳೆ ರಜೆ ಇದೆ. ಸೋಮವಾರವೇ ಮೊತ್ತ ಮಂಜೂರಾದರೂ ಆ ದಿನವೇ ಪ್ರಕ್ರಿಯೆ ಮುಗಿದು ವೇತನ ವಿತರಣೆ ನಡೆಯುವ ಸಾಧ್ಯತೆ ಕಡಿಮೆ.
ಕೆಎಸ್‍ಆರ್‍ಟಿಸಿಯಲ್ಲಿ ಎರಡು ತಿಂಗಳ ಪಿಂಚಣಿ ವಿತರಣೆ ಸ್ಥಗಿತಗೊಂಡಿದೆ. ಹಣಕಾಸು ಮತ್ತು ಸಹಕಾರಿ ಇಲಾಖೆಗಳು ಮತ್ತು ಕೆಎಸ್‍ಆರ್‍ಟಿಸಿ ನಡುವಿನ ಒಪ್ಪಂದದ ಪ್ರಕಾರ, ಸಹಕಾರ ಇಲಾಖೆಯು ಪ್ರತಿ ವರ್ಷ ಪಾವತಿಸಬೇಕಾದ ಪಿಂಚಣಿ ಮೊತ್ತವನ್ನು ನಿಗದಿಪಡಿಸುತ್ತದೆ. ಜೂನ್‍ನಲ್ಲಿ ಒಪ್ಪಂದಕ್ಕೆ ಸಹಿ ಹಾಕ¯ಬೇಕಿತ್ತು. ಹೊಸ ಒಪ್ಪಂದಕ್ಕೆ ಇನ್ನೂ ಸಹಿ ಹಾಕದಿರುವುದು ಒಪ್ಪಂದ ಸ್ಥಗಿತಗೊಳ್ಳಲು ಕಾರಣವಾಗಿದೆ. ಸುಮಾರು ಅರ್ಧ ಲಕ್ಷ ಪಿಂಚಣಿದಾರರೂ ಸಂಕಷ್ಟದಲ್ಲಿದ್ದಾರೆ.