ತಿರುವನಂತಪುರ: ರಾಜ್ಯದ ಶಾಲೆಗಳಲ್ಲಿ ಕಲೆ ಮತ್ತು ಕ್ರೀಡೆಗಳ ಅವಧಿಯಲ್ಲಿ ಇತರೆ ವಿಷಯಗಳನ್ನು ಬೋಧಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಸೂಚಿಸಿದ್ದಾರೆ.
ಮಕ್ಕಳ ಹಕ್ಕು ಆಯೋಗದ ಸೂಚನೆ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳಿಂದ ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ಮಕ್ಕಳ ಹಕ್ಕು ಆಯೋಗವು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ನೀಡಿರುವ ನೋಟಿಸ್ ಪ್ರಕಾರ, ರಾಜ್ಯದ ಶಾಲೆಗಳಲ್ಲಿ ಒಂದರಿಂದ ಹನ್ನೆರಡನೇ ತರಗತಿಯವರೆಗೆ ಕಲೆ ಮತ್ತು ಕ್ರೀಡೆಯ ಅವಧಿಗಳಲ್ಲಿ ಇತರೆ ವಿಷಯಗಳನ್ನು ಬೋಧಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮಕ್ಕಳಿಂದಲೂ ದೂರುಗಳು ಬಂದಿದ್ದವು. ಹಕ್ಕುಗಳ ಆಯೋಗಕ್ಕೆ ಬಂದಿರುವ ದೂರಿನಲ್ಲಿ, ಕಲೆ ಮತ್ತು ಕ್ರೀಡೆಯ ಅವಧಿಯಲ್ಲಿ ಇತರ ವಿಷಯಗಳನ್ನು ಬಲವಂತವಾಗಿ ಕಲಿಸುವುದು ಮಕ್ಕಳ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಆರೋಪಿಸಲಾಗಿದೆ.
ದೂರುಗಳನ್ನು ಆಧರಿಸಿ ಮಕ್ಕಳ ಹಕ್ಕು ಆಯೋಗವು ಕಳೆದ ಮೇ ತಿಂಗಳಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಆಧರಿಸಿ ರಾಜ್ಯದ ಎಲ್ಲ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಉಪಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಜುಲೈ 19ರಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯು ರಾಜ್ಯದ ಎಲ್ಲಾ ಎಲ್‍ಪಿ, ಯುಪಿ, ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಿಗೆ ಲಭ್ಯವಾಗುವಂತೆ ಸೂಚಿಸಲಾಗಿದೆ.