ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಬಹುತೇಕ ಹೊಳೆಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಜುಲೈ 27ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೀಂಜ ಪಂಚಾಯಿತಿಯ ದುರ್ಗಿಪಳ್ಳ ನಿವಾಸಿ ಅಹಮ್ಮದ್ ಎಂಬವರ ಮನೆ ಬಿರುಸಿನ ಮಳೆಗೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮನೆಯ ಒಂದು ಪಾಶ್ರ್ವ ಕುಸಿಯುತ್ತಿದ್ದಂತೆ ಮಹಮ್ಮದ್ ಅವರ ಪತ್ನಿ ಮತ್ತು ಮಕ್ಕಳು ಮನೆಯಿಂದ ಹೊರಕ್ಕೆ ಓಡಿದ ಪರಿಣಾಮ ಪ್ರಾಣಾಪಾಯ ತಪ್ಪಿದೆ. ಎರಡು ಲಕ್ಷ ರಊ. ನಷ್ಟ ಅಂದಾಜಿಸಲಾಗಿದೆ. ಸ್ಥಳಕ್ಕೆ ಶಾಸಕ ಎ.ಕೆ.ಎಂ ಅಶ್ರಫ್, ಇತರ ಜನಪ್ರತಿನಿಧಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ರಾತ್ರಿ ವಾಹನ ಸಂಚಾರ ನಿಷೇಧ:
ಪಾಣತ್ತೂರು-ಕಲ್ಲಪಳ್ಳಿ- ಸುಳ್ಯ ಅಂತಾರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಆದೇಶ ಹೊರಡಿಸಿದ್ದಾರೆ. ಪನತ್ತಡಿ ಗ್ರಾಮದ ಕಲ್ಲಪಳ್ಳಿ ಸನಿಹದ ಬಟೋಲಿ ಎಂಬಲ್ಲಿ ರಸ್ತೆಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತವಾಗಿರುವ ಬಗ್ಗೆ ವೆಳ್ಳರಿಕುಂಡ್ ತಾಲೂಕು ತಹಸೀಲ್ದಾರ್, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ನಿರ್ದೇಶ ಮೇರೆಗೆ ಜಿಲ್ಲಾ ಭೂಗರ್ಭಶಾಸ್ತ್ರಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದು, ಬಾಟೋಳಿ ಸಮೀಪದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಮತ್ತಷ್ಟು ಭೂಕುಸಿತವಾಗುವ ಅಪಾಯವಿದೆ ಎಂದು ಮಾಹಿತಿ ನೀಡಿದ್ದಾರೆ ಪ್ರಸಕ್ತ ರಸ್ತೆಯಲ್ಲಿನ ಮಣ್ಣು ಮತ್ತು ಇತರ ತ್ಯಾಜ್ಯ ತೆರವುಗೊಳಿಸಿದ ನಂತರ ಹಗಲಿನಲ್ಲಿ ಈ ರಸ್ತೆಯ ಮೂಲಕ ನಿಯಂತ್ರಿತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಾಸರಗೋಡು ಉಮಾನರ್ಸಿಂಗ್ ಹೋಮ್ ರಸ್ತೆಯ ಅಂಚಿನ ಅಡಕೆ ಮರವೊಂದು ಬಿರುಸಿನ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಬೀಳುವ ಸ್ಥಿತಿಯಲ್ಲಿದೆ.