ಕಾಸರಗೋಡು: ಜಿಲ್ಲೆಯ 30 ಸರ್ಕಾರಿ ಶಾಲೆಗಳಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಗಳಿಗೆ ಪೀಠೋಪಕರಣ ನೀಡಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕಾಗಿ ಒಂದು ಕೋಟಿ ರೂ. ಮೀಸಲಿರಿಸಲಾಗಿದೆ.
ಜಿಲ್ಲಾ ಪಂಚಾಯಿತಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಊಟದ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಸ್ಟೀಮ್ ಕುಕ್ಕರ್ ಒದಗಿಸಲಾಗುವುದು. ಇದಕ್ಕಾಗಿ ಜಿಲ್ಲೆಯ 17 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಯೋಜನೆ ಯಶಸ್ವಿಯಾದರೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಯೋಜನೆ ವಿಸ್ತರಿಸಲಾಗುವುದು. ಅಲ್ಲದೆ ಆಯ್ದ ಹತ್ತು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲಾಗುವುದು. ಸ್ಟೀಮ್ ಕುಕ್ಕರ್ ಮತ್ತು ಲ್ಯಾಬ್ ಸೌಲಭ್ಯಕ್ಕಗಿ ತಲಾ ಒಂದು ಕೋಟಿ, ಜಿಲ್ಲೆಯಲ್ಲಿ 64 ಪ್ರಾಥಮಿಕಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಕೋಟಿ ರೂ. ಮೀಸಲಿಡಲಾಗಿದೆ. ನಾಲಿಲಂಕಂಡ ಜೀವವೈವಿಧ್ಯ ಉದ್ಯಾನ ಹಾಗೂ ಜಿಲ್ಲೆಯ 12 ಶಾಲೆಗಳಲ್ಲಿ ಸ್ಥಾಪಿಸಿರುವ ನೀರಿನ ಗುಣಮಟ್ಟದ ಲ್ಯಾಬ್‍ಗಳ ಉದ್ಘಾಟನೆ ಆಗಸ್ಟ್ 2 ರಂದು ನಡೆಯಲಿರುವುದು. ನಿವ್ವಳ ಶೂನ್ಯ ಕಾರ್ಬನ್ ಸ್ಥಿತಿ ಸಾಧಿಸುವ ಅಂಗವಾಗಿ ಯುವ ಬ್ರಿಗೇಡ್‍ಗೆ ತರಬೇತಿ ನೀಡಲಾಗುವುದು.
ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾಕೃಷ್ಣ, ಶಿನೋಜ್ ಚಾಕೊ, ಕೆ.ಶಕುಂತಲಾ, ಜಿಪಂ ಸದಸ್ಯರಾದ ಸಿ.ಜೆ.ಸಜಿತ್, ಗೋಲ್ಡನ್ ಅಬ್ದುಲ್ ರೆಹಮಾನ್ ಕೆ.ಕಮಲಾಕ್ಷಿ, ನಾರಾಯಣ ನಾಯ್ಕ್, ಶೈಲಜಾ ಭಟ್, ಜಾಸ್ಮಿನ್ ಕಬೀರ್, ಜಮೀಲಾ ಸಿದ್ದೀಕ್, ಶಫೀಕ್ ರಜಾಕ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪಿ.ಕೆ.ಸಜೀವ್, ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು. ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಊಮನ್‍ಚಾಂಡಿ ಅವರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು. ಬೇಬಿ ಬಾಲಕೃಷ್ಣನ್ ಸಂತಾಪ ಸೂಚಕ ಠರಾವು ಮಂಡಿಸಿದರು.