ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ಮಾಡುತ್ತಿರುವುದು ಗಂಭೀರ ಸಮಸ್ಯೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ತಾರತಮ್ಯ ಇಲ್ಲದ, ಉತ್ತಮ ವಾತಾವರಣ ಕಲ್ಪಿಸಲು ಕೈಗೊಂಡಿರುವ ಹಾಗೂ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಕುರಿತು ಸ್ಪಷ್ಟಪಡಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಸುಪ್ರೀಂ ಕೋರ್ಟ್ ಸೂಚಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರಮ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ರೋಹಿತ್ ವೇಮುಲ ಹಾಗೂ ಪಾಯಲ್ ತದ್ವಿ ಅವರ ಪೋಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಎಂ.ಎಂ. ಸುಂದರೇಶ್ ಅವರು, ಯುಜಿಸಿಗೆ ಈ ಸೂಚನೆ ನೀಡಿದ್ದಾರೆ.
2016ರ ಜನವರಿ 17ರಂದು ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಹಾಗೂ 2019ರ ಮೇ 22ರಂದು ಮುಂಬೈನ ಟಿ.ಎನ್. ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜ್‌ನ ಬುಡಕಟ್ಟು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿ ಪಾಯಲ್ ತದ್ವಿ ಅವರು ಜಾತಿ ತಾರತಮ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.