ಆಮ್ಸ್ಟರ್ಡ್ಯಾಮ್: ಗುಲಾಮಗಿರಿಯಲ್ಲಿ ನೆದರ್ಲ್ಯಾಂಡ್ ನ ಐತಿಹಾಸಿಕ ಒಳಗೊಳ್ಳುವಿಕೆ ಮತ್ತು ಅದು ಇಂದಿಗೂ ಪರಿಣಾಮ ಬೀರುತ್ತಿರುವ ಬಗ್ಗೆ ಡಚ್ ದೊರೆ ವಿಲಿಯಂ ಅಲೆಕ್ಸಾಂಡರ್ ಶನಿವಾರ ಕ್ಷಮೆ ಯಾಚಿಸಿದ್ದಾರೆ.
ನೆದರ್ಲ್ಯಾಂಡ್ ಮತ್ತು ಅದು ಈ ಹಿಂದೆ ಕೆರಿಬಿಯನ್ ದ್ವೀಪದಲ್ಲಿ ಹೊಂದಿದ್ದ ವಸಾಹತುಗಳಲ್ಲಿ ಗುಲಾಮಗಿರಿಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸಿದ 160ನೇ ವಾರ್ಷಿಕೋತ್ಸವವನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಗುಲಾಮಗಿರಿಯಲ್ಲಿ ಡಚ್ ಇತಿಹಾಸವನ್ನು ನೆನಪಿಸಿಕೊಳ್ಳುವ ಈ ದಿನದಂದು ಮನುಕುಲದ ವಿರುದ್ಧದ ಈ ಅಪರಾಧಕ್ಕಾಗಿ ನಾನು ಕ್ಷಮೆ ಯಾಚಿಸುತ್ತಿದ್ದೇನೆ. ವರ್ಣಭೇದ ನೀತಿಯು ಡಚ್ ಸಮಾಜದಲ್ಲಿ ಒಂದು ಸಮಸ್ಯೆಯಾಗಿ ಉಳಿದಿದೆ ಮತ್ತು ಎಲ್ಲರೂ ನನ್ನ ಕ್ಷಮೆಯನ್ನು ಬೆಂಬಲಿಸುವುದಿಲ್ಲ. ಆದರೆ ಈಗ ಕಾಲ ಬದಲಾಗಿದೆ ಮತ್ತು ಸರಪಳಿಯನ್ನು ತುಂಡರಿಸಲಾಗಿದೆ ಎಂದು ವಿಲಿಯಂ ಅಲೆಕ್ಸಾಂಡರ್ ಹೇಳಿದ್ದಾರೆ.
ಅಟ್ಲಾಂಟಿಕ್ ಗುಲಾಮ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಮತ್ತು ಅದರಿಂದ ಲಾಭ ಪಡೆದಿರುವ ಜವಾಬ್ದಾರಿಯನ್ನು ನೆದರ್ಲ್ಯಾಂಡ್ ದೇಶ ಹೊರುತ್ತದೆ ಎಂದು ಕಳೆದ ಡಿಸೆಂಬರ್ನಲ್ಲಿ ಪ್ರಧಾನಿ ಮಾರ್ಕ್ ರೂಟ್ ಹೇಳಿಕೆ ನೀಡಿದ್ದರು. ಆದರೆ 2021ರಲ್ಲಿ ಸಲಹಾ ಸಮಿತಿ ಶಿಫಾರಸು ಮಾಡಿದ್ದರೂ ಸರಕಾರ ಯಾವುದೇ ಪರಿಹಾರ ನೀಡುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದರು. 1675ರಿಂದ 1770ರ ಅವಧಿಯಲ್ಲಿ ನೆದರಲ್ಯಾಂಡ್ ತನ್ನ ವಸಾಹತುಗಳಿಂದ ಸುಮಾರು 600 ದಶಲಕ್ಷ ಡಾಲರ್(ಈಗಿನ ದರ)ನಷ್ಟು ಲಾಭ ಗಳಿಸಿದೆ ಎಂದು ಸರಕಾರ ನಿಯೋಜಿಸಿದ ಆಯೋಗ ಕಳೆದ ತಿಂಗಳು ವರದಿ ಮಾಡಿದೆ.