ನವದೆಹಲಿ: ಪ್ರವಾಹ ಸಂತ್ರಸ್ತರಿಗಾಗಿ ತೆರೆಯಲಾಗಿರುವ ಶಿಬಿರಗಳಲ್ಲಿ ನೀರು ಮತ್ತು ಶೌಚಾಲಯಗಳ ಕೊರತೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ದೆಹಲಿ ಲೋಕೋಪಯೋಗಿ ಇಲಾಖೆ ಸಚಿವೆ ಆತಿಶಿ ಅವರು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

'ಪರಿಹಾರ ಶಿಬಿರಗಳಲ್ಲಿ ನೀರು ಹಾಗೂ ಶೌಚಾಲಯಗಳ ಕೊರತೆ ಇದೆ. ಸರಿಯಾದ ವಿದ್ಯುತ್ ಸಂಪರ್ಕವಿಲ್ಲ. ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂಬ ದೂರುಗಳು ನಿನ್ನೆಯಿಂದಲೂ ಕೇಳಿಬರುತ್ತಿವೆ. ವಿಭಾಗೀಯ ಆಯುಕ್ತರನ್ನು ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ, ಅವರು ನನ್ನ ಕರೆಗಳಿಗಾಗಲೀ, ಸಂದೇಶಗಳಿಗಾಗಲೀ ಸ್ಪಂದಿಸುತ್ತಿಲ್ಲ' ಎಂದು ದೂರಿದ್ದಾರೆ.
ಪ್ರವಾಹದ ಕಾರಣದಿಂದಾಗಿ ಅವರವರ ಮನೆಗಳಿಂದ ಸ್ಥಳಾಂತರಗೊಂಡಿರುವ ನಗರದ ಪ್ರತಿಯೊಬ್ಬ ವ್ಯಕ್ತಿಗೂ ಸಾಧ್ಯವಾದ ಮಟ್ಟಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂದುವರಿದು, 'ಮುಖ್ಯ ಕಾರ್ಯದರ್ಶಿಗಳು, ಶಿಬಿರಗಳಲ್ಲಿ ಸೂಕ್ತ ಸೌಲಭ್ಯಗಳು ದೊರೆಯುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಜನರಿಗೆ ಸಂಕಷ್ಟವಾಗುವ ರೀತಿಯಲ್ಲಿ ಅಸಡ್ಡೆಯಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.
ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣದ ಸಲುವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಇದೇ ವೇಳೆ ಖಂಡಿಸಿರುವ ಸಚಿವೆ, 'ಸುಗ್ರೀವಾಜ್ಞೆಯು ವಿನಾಶಕಾರಿ ಎಂಬುದು ಪ್ರವಾಹ ಪರಿಹಾರ ಸಂದರ್ಭದಲ್ಲಿ ಸಾಬೀತಾಗಿದೆ' ಎಂಬುದನ್ನು ಒತ್ತಿ ಹೇಳಿದ್ದಾರೆ.