ಕಾಸರಗೋಡು: ಚಂದ್ರಯಾನ 3 ಯಶಸ್ವಿ ಉಡಾವಣೆಯಿಂದ ಕಾಸರಗೋಡಿಗೂ ಹೆಮ್ಮೆಯ ಕ್ಷಣವಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಿಜ್ಞಾನಿಗಳ ಪೈಕಿ ಪಡನ್ನಕ್ಕಾಡ್ ಬ್ಯಾಂಕ್ ರಸ್ತೆ ನಿವಾಸಿ ವಿ ಸನೋಜ್ ಸ್ಥಾನಪಡೆದಿದ್ದು ಕಾಸರಗೋಡಿಗೆ ಹೆಮ್ಮೆಯೆನಿಸಿದೆ.
ಸನೋಜ್ 2010 ರಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಜಿ.ಎಸ್.ಎಲ್.ವಿ. ಮಾರ್ಕ್ 3 ರ ತಂಡದಲ್ಲಿ ಕೆಲಸ ಮಾಡುತ್ತಿದ್ದು, ಇದು ಭಾರತದ ಹೆಮ್ಮೆಯ ಗಗನಯಾನ್ ಮಿಷನ್‍ನ ಭಾಗವಾಗಿದೆ. ತಿರುವನಂತಪುರಂನ ಶ್ರೀಚಿತ್ತಿರತಿರುನಾಳ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ತಿರುವನಂತಪುರಂ ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಸನೋಜ್ ಅವರು 2010 ರಿಂದ ಇಸ್ರೋಕ್ಕೆ ಸೇರಿಕೊಂಡಿದ್ದರು. ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಅಭಿವೃದ್ಧಿಪಡಿಸುವಲ್ಲಿ ಸನೋಜ್ ಪ್ರಮುಖ ಪಾತ್ರ ವಹಿಸಿದ್ದಾರೆ.
ರಾಕೆಟ್ ಭಾಗಗಳ ಜೋಡಣೆ ಮತ್ತು ಟೇಕ್-ಆಫ್ ಸಮಯದಲ್ಲಿ ಬೇರ್ಪಡಿಸುವ ಕೆಲಸ (ಉಪಗ್ರಹ ಏಕೀಕರಣ ಮತ್ತು ಪ್ರತ್ಯೇಕತೆ) ನಿರ್ವಹಣೆ ಸನೋಜ್ ಅವರದಾಗಿತ್ತು. ಅವರು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ, ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ, ಇಂಜಿನಿಯರ್ಸ್ ಮತ್ತು ಸಿಸ್ಟಮ್ಸ್ ಸೊಸೈಟಿ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಸನೋಜ್ ತಿರುವನಂತಪುರದ ಪೆಟ್ಟಾದಲ್ಲಿ ಪ್ರಸ್ತುತ ವಾಸಿಸುತ್ತಿದ್ದಾರೆ. ಪಡÀನ್ನಕ್ಕಾಡ್ ಮೂಲದ ನಾರಾಯಣನ್ ಕಾರ್ನವರ್-ಪಿ.ವಿ. ಲಕ್ಷ್ಮೀ ದಂಪತಿಯ ಪುತ್ರ. ಪತ್ನಿ ಸುಜಾ, ಮಕ್ಕಳು: ಅಗ್ನಿ, ಆರುಷ್ ಅವರನ್ನೊಳಗೊಂಡ ಕುಟುಂಬ ಪಡನ್ನಕ್ಕಾಡಿನ ಮೂಲ ಮನೆಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ.
ಅಭಿಮತ: 'ನನಗೆ ಅತೀವ ಸಂತಸವಾಗಿದೆ. ರಾಷ್ಟ್ರದ ಹೆಮ್ಮೆಯ ಘಳಿಗೆಯಲ್ಲಿ ಭಾಗಿಯಾಗಿರುವುದು ದೊಡ್ಡ ಸೌಭಾಗ್ಯ. ಕೆಲಸ ಇಲ್ಲಿಗೆ ಮುಗಿಯುವುದಿಲ್ಲ, ಚಂದ್ರನ ಮೇಲೆ ಇಳಿಯುವವರೆಗೂ ಮುಂದುವರೆಯುತ್ತದೆ.
ವಿ. ಸನೋಜ್
ಇಸ್ರೋ ವಿಜ್ಞಾನಿ.