ಮುಂಬೈ (PTI): ಮಾಹಿತಿ ಮತ್ತು ತಂತ್ರಜ್ಞಾನ (ಐ.ಟಿ) ನಿಯಮ ತಿದ್ದುಪಡಿಯು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಬೀರುವ ಪರಿಣಾಮಗಳನ್ನು ತಿಳಿದುಕೊಳ್ಳುವ ಮೊದಲು, 'ನಕಲಿ', 'ಸುಳ್ಳು' ಮತ್ತು 'ದಾರಿತಪ್ಪಿಸು' (ಫೇಕ್, ಫಾಲ್ಸ್ ಮತ್ತು ಮಿಸ್‌ಲೀಡಿಂಗ್)- ಈ ಮೂರು ಪದಗಳ ಮಿತಿ ಮತ್ತು ಎಲ್ಲೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಹೇಳಿದೆ.
ಐ.ಟಿ ನಿಯಮ ತಿದ್ದುಪಡಿ ಪ್ರಶ್ನಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲ ಗೋಖಲೆ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಯಾವುದೇ ನೀತಿಯ ಬಗೆಗಿನ ಅಭಿಪ್ರಾಯಗಳು ಮತ್ತು ಸಂಪಾದಕೀಯ ಬರಹಗಳನ್ನೂ 'ತಪ್ಪುದಾರಿಗೆಳೆಯುತ್ತಿವೆ' ಎಂದು ಪರಿಗಣಿಸಬಹುದೇ ಮತ್ತು ವಿವೇಚನಾಧಿಕಾರಕ್ಕೆ ಚೌಕಟ್ಟು ಹಾಕಲು ಹಾಗೂ ಅನಿಮಿಯತ ಅಧಿಕಾರ ನೀಡಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನಿಸಿತು.
ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಿಯಮದಲ್ಲಿ ತಿಳಿಸಲಾಗಿದೆ. ಆದರೆ, ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿ ಅಥವಾ ಸಂಬಂಧಿಸದ ಸುದ್ದಿ ಎಂದು ವ್ಯಾಖ್ಯಾನಿಸುವುದು ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.
'ಇದು ಸುಳ್ಳು ಎಂದು ಒಬ್ಬರು ನಿರ್ಣಾಯಕವಾಗಿ ಹೇಳಲು ಹೇಗೆ ಸಾಧ್ಯ? ಇಂಥ ಅಧಿಕಾರದ ಮೂಲ ಏನು? ಎಫ್‌ಸಿಯು (ಫ್ಯಾಕ್ಟ್ ಚೆಕ್ ಘಟಕ) ಮಾಹಿತಿಯು ವಿಶ್ವಾಸಾರ್ಹ ಅಥವಾ ಅಲ್ಲ ಎಂದು ಹೇಳಬಹುದು. ಸಿವಿಲ್ ನ್ಯಾಯಾಲಯ ಸಹ ಅಧಿಕಾರಯುಕ್ತವಾಗಿ ಯಾವುದು ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಸಂಭಾವ್ಯತೆ ಆಧಾರದಲ್ಲಿ ಅದು ಹೇಳಿಕೆ ನೀಡಬಹುದು' ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದರು.
ಒಬ್ಬ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯ ಮತ್ತು ಸಂಪಾದಕೀಯ ಬರಹಗಳೂ ಕಾನೂನಿನ ಅಡಿಗೆ ಒಳಪಡುತ್ತವೆಯೇ? ಉದಾಹರಣೆಗೆ ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಸರ್ಕಾರ ನೀಡುವ ಅಂಕಿಅಂಶಗಳ ಕುರಿತ ಟೀಕೆ. ಇದನ್ನೂ ಸುಳ್ಳು ಅಥವಾ ದಾರಿ ತಪ್ಪಿಸುವ ಸುದ್ದಿ ಎಂದು ಪರಿಗಣಿಸಲಾಗುತ್ತದೆಯೇ ಎಂದು ಕೋರ್ಟ್ ಪ್ರಶ್ನಿಸಿತು. ನಂತರ ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿ ಆದೇಶಿಸಿತು.
ಈ ನಿಯಮವು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಫ್ಯಾಕ್ಟ್ ಚೆಕ್ ಘಟಕ ಸ್ಥಾಪಿಸುವ ಅಧಿಕಾರ ನೀಡುತ್ತದೆ. ಈ ಘಟಕವು ಕೇಂದ್ರ ಸರ್ಕಾರದ ವ್ಯವಹಾರಗಳಿಗೆ ಸಂಬಧಿಸಿದ ಯಾವ ಸುದ್ದಿ ಸುಳ್ಳು ಅಥವಾ ದಾರಿತಪ್ಪಿಸುವ ಸುದ್ದಿ ಎಂಬುದನ್ನು ಗುರುತಿಸಲಿದೆ.
ಸ್ಟ್ಯಾಂಡಪ್ ಕಮಿಡಿಯನ್ ಕುನಾಲ್ ಕಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಭಾರತದ ನಿಯತಕಾಲಿಕೆಗಳ ಸಂಘ ತಿದ್ದುಪಡಿ ನಿಯಮದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನೂತನ ನಿಯಮಗಳನ್ನು ಅಸಾಂವಿಧಾನಿಕ ಎಂದು ಕರೆದು ಇವು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಲಿವೆ ಎಂದು ಹೇಳಿದ್ದರು.