ನವದೆಹಲಿ: ಈಶಾನ್ಯ ದೆಹಲಿಯ ಭಜನ್‌ಪುರ ಚೌಕ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಭಾನುವಾರ ಬೆಳಗ್ಗೆ ದೇವಸ್ಥಾನ ಮತ್ತು ಮಜಾರ್ ತೆರವುಗೊಳಿಸಲಾಗಿದೆ. ಭಾರಿ ಪೊಲೀಸ್ ಬಂದೋಬಸ್ತ್ ನಡುವೆ ಈ ಕಾರ್ಯಾಚರಣೆ ನಡೆದಿದೆ.
ಕೆಲವು ದಿನಗಳ ಹಿಂದೆ ನಡೆದ 'ಧಾರ್ಮಿಕ ಸಮಿತಿ' ಸಭೆಯಲ್ಲಿ ಎರಡೂ ಕಟ್ಟಡಗಳನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ನಿವಾಸಿಗಳು ಮತ್ತು ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
'ಎಲ್ಲವೂ ಅತ್ಯಂತ ಶಾಂತಿಯುತವಾಗಿ ನಡೆದಿದೆ'ಎಂದು ಪೊಲೀಸ್ ಉಪ ಕಮಿಷನರ್ (ಈಶಾನ್ಯ) ಜಾಯ್ ಟಿರ್ಕಿ ತಿಳಿಸಿದ್ದಾರೆ.
ಭಜನ್‌ಪುರ ಚೌಕ್‌ನಲ್ಲಿ ರಸ್ತೆಯ ಎದುರು ಬದಿಯಲ್ಲಿ ಹನುಮಾನ್ ದೇವಸ್ಥಾನ ಮತ್ತು ಮಜಾರ್ ಇತ್ತು ಎಂದು ಟಿರ್ಕೆ ಹೇಳಿದರು. ಕೆಲವು ದಿನಗಳ ಹಿಂದೆ, ಸಹರನ್‌ಪುರ ಮೇಲ್ಸೇತುವೆಗಾಗಿ ರಸ್ತೆಯನ್ನು ಅಗಲಗೊಳಿಸಲು ಎರಡೂ ಕಟ್ಟಡಗಳನ್ನು ತೆರವು ಮಾಡಲು ಧಾರ್ಮಿಕ ಸಮಿತಿಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
'ಕೆಲವು ದಿನಗಳ ಹಿಂದೆಯೇ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು. ಆದರೆ, ಇಲ್ಲಿನ ಸ್ಥಳೀಯ ಮುಖಂಡರು ಕೆಲವು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಮಯ ಕೇಳಿದ್ದರು. ಇಂದು (ಭಾನುವಾರ) ನಾವು ಅವರೆಲ್ಲರ ಜೊತೆ ಸೂಕ್ತ ಮಾತುಕತೆ ನಡೆಸಿದ ನಂತರ, ಎಲ್ಲರ ಸಹಕಾರದಿಂದ ಎರಡೂ ಧಾರ್ಮಿಕ ಕಟ್ಟಡಗಳನ್ನು ಇಲ್ಲಿಂದ ತೆರವು ಮಾಡಲಾಯಿತು. ಭಕ್ತರು ಕೂಡ ಇಲ್ಲಿಗೆ ಬಂದು ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವ ಮುನ್ನ ತಮ್ಮ ಪೂಜೆಯನ್ನು ನೆರವೇರಿಸಿದರು' ಎಂದು ಅವರು ಹೇಳಿದ್ದಾರೆ.
ಈಶಾನ್ಯ ದೆಹಲಿಯನ್ನು ಕೋಮು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. 2020ರಲ್ಲಿ ಇಲ್ಲಿ ನಡೆದ ಗಲಭೆಯಲ್ಲಿ 50ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.