ನವದೆಹಲಿ (PTI): ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ರಜಿಸ್ಟ್ರಾರ್ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ನವದೆಹಲಿ (PTI): ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ರಜಿಸ್ಟ್ರಾರ್ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ವಿವಾದಕ್ಕೆ ಸಂಬಂಧಿಸಿ ಮಥುರಾ ಕೋರ್ಟ್‌ನಲ್ಲಿ ದಾಖಲಾಗಿದ್ದ ಎಲ್ಲ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ಸ್ವತಃ ತನಗೇ ವರ್ಗಾಯಿಸಿಕೊಂಡು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
'ಈ ಪ್ರಕರಣದ ಸ್ವರೂಪವನ್ನು ಪರಿಗಣಿಸಿದರೆ, ಹೈಕೋರ್ಟ್ ವಿಚಾರಣೆ ನಡೆಸುವುದು ಉತ್ತಮವಲ್ಲ ಅಲ್ಲವೇ?' ಎಂದ ನ್ಯಾಯಮೂರ್ತಿ ಕೌಲ್, 'ಉನ್ನತ ಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ, ಪ್ರಕರಣ ಬಾಕಿ ಉಳಿದು ಕಕ್ಷಿದಾರರ ಪೈಕಿ ಯಾರಾದರೂ ಒಬ್ಬರಿಗೆ ಅಸಮಾಧಾನವಾಗಲಿದೆ' ಎಂದು ಅಭಿಪ್ರಾಯಪಟ್ಟರು.
'ಹೈಕೋರ್ಟ್ ರಜಿಸ್ಟ್ರಾರ್ ಅವರು ವಿವರಗಳನ್ನು ಸಲ್ಲಿಸಿದ ನಂತರ ನಿರ್ಧಾರ ಪ್ರಕಟಿಸಲಾಗುವುದು' ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.