HEALTH TIPS

ಬಾಲಕಿ ಅತ್ಯಾಚಾರ, ಹತ್ಯೆ- ಆರೋಪಿಗೆ ಮರಣದಂಡನೆ ವಿಧಿಸಲು ಆಗ್ರಹ

               ಕೊಚ್ಚಿ: ಐದು ವರ್ಷದ ಮಗುವಿಗೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಆರೋಪಿ, ಬಿಹಾರದ ವಲಸೆ ಕಾರ್ಮಿಕನಿಗೂ ಮರಣದಂಡನೆ ನೀಡಬೇಕು ಎಂದು ಸಂತ್ರಸ್ತ ಮಗುವಿನ ತಾಯಿ ಮತ್ತು ಪೋಷಕರು ಒತ್ತಾಯಿಸಿದರು.

                  ಅಂತಿಮ ದರ್ಶನಕ್ಕಾಗಿ ಮಗುವಿನ ಮೃತದೇಹವಿರಿಸಿದ್ದ ಶಾಲೆಗೆ ಭಾನುವಾರ ನೂರಾರು ಜನ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.

                ಆರೋಪಿಗೆ ಕಠಿಣಶಿಕ್ಷೆ ವಿಧಿಸಬೇಕು, ಮರಣದಂಡನೆ ವಿಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ನೂರಾರು ಜನರ ಸಮ್ಮುಖದಲ್ಲಿ ಬಾಲಕಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವಾಗ ಬಹುತೇಕರು ಕಣ್ಣೀರಾಗಿದ್ದರು ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

                 'ಆರೋಪಿಗೆ ಕೇವಲ ಜೈಲುಶಿಕ್ಷೆ ವಿಧಿಸಿದರೆ ಸಾಲದು. ಬಾಲಕಿಯನ್ನು ಕೊಂದಂತೆಯೇ ನಿಷ್ಕರುಣಿಯಾಗಿ ಅವನನ್ನೂ ಕೊಲ್ಲಬೇಕು. ಒಂದು ವೇಳೆ ಸರ್ಕಾರದಿಂದ ಇದು ಸಾಧ್ಯವಾಗದಿದ್ದಲ್ಲಿ ಆತನನ್ನು ಸಾರ್ವಜನಿಕರ ಕೈಗೆ ಒಪ್ಪಿಸಲಿ' ಎಂದು ಮೃತ ಬಾಲಕಿಯ ತಾಯಿ ಸೇರಿದಂತೆ ಬಾಲಕಿಯ ಸಹಪಾಠಿಗಳ ಪೋಷಕರು ಆಗ್ರಹಿಸಿದ್ದಾರೆ.

              'ಈ ದೌರ್ಜನ್ಯವನ್ನು ಸಹಿಸಲಾಗದು. ಈ ಘಟನೆಯನ್ನು ಕೇಳಿದ ಬಳಿಕ ನನಗೆ ಸರಿಯಾಗಿ ನಿದ್ದೆ ಕೂಡಾ ಮಾಡಲಾಗುತ್ತಿಲ್ಲ. ನಮ್ಮ ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಿದೆ. ಈ ರೀತಿಯ ಘಟನೆಗಳು ಮತ್ತೆ ಆಗಬಾರದು' ಎಂದು ಮಹಿಳೆಯೊಬ್ಬರು ಆಗ್ರಹಿಸಿದರು.

                ಘಟನೆಯ ವಿವರ: ಬಾಲಕಿ ಶುಕ್ರವಾರ ನಾಪತ್ತೆಯಾಗಿದ್ದಳು. ಬಾಲಕಿಯ ಕುಟುಂಬ ವಾಸಿಸುತ್ತಿದ್ದ ಕಟ್ಟಡದಲ್ಲೇ ಇದ್ದ ಬಿಹಾರದ ವಲಸೆ ಕಾರ್ಮಿಕ ಆಕೆಗೆ ಆಮಿಷವೊಡ್ಡಿ ಬೇರೆಡೆಗೆ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಕ್ರೂರವಾಗಿ ಹತ್ಯೆ ಮಾಡಿದ್ದ. ಬಾಲಕಿಯ ಕುಟುಂಬದವರು ಕೂಡಾ ಬಿಹಾರ ರಾಜ್ಯದವರೇ.

                  ಅಳುವಾ ಪ್ರದೇಶದ ಸ್ಥಳೀಯ ಮಾರುಕಟ್ಟೆಯ ಬಳಿ ಶನಿವಾರ ಬಾಲಕಿಯ ಮೃತದೇಹವು ಕಟ್ಟಿದ್ದ ಗೋಣಿಚೀಲವೊಂದರಲ್ಲಿ ಪತ್ತೆಯಾಗಿತ್ತು. ಆರೋಪಿಯನ್ನು ಶನಿವಾರವೇ ಬಂಧಿಸಲಾಗಿತ್ತು. ಆದರೆ, ಆತ ಪಾನಮತ್ತನಾಗಿದ್ದರಿಂದ ಆತನಿಂದ ಯಾವುದೇ ವಿಷಯ ಬಾಯಿಬಿಡಿಸಲು ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

                      ಶಾಸಕ ಪ್ರತಿಕ್ರಿಯೆ: 'ಆರೋಪಿಗೆ ಮರಣದಂಡನೆಯಂಥ ಗರಿಷ್ಠ ಶಿಕ್ಷೆ ಆಗುವುದನ್ನು ಪೊಲೀಸರು ಮತ್ತು ಸರ್ಕಾರ ಖಾತ್ರಿಗೊಳಿಸಬೇಕು' ಎಂದು ಕಾಂಗ್ರೆಸ್ ಶಾಸಕ ಅನ್ವರ್ ಸಾದತ್ ಹೇಳಿದ್ದಾರೆ.

                'ಜನಪ್ರತಿನಿಧಿಯಾಗಿ ಹಾಗೂ ತಂದೆಯಾಗಿ ನಾನು ಇದನ್ನಷ್ಟೇ ಬಯಸುವುದು. ಈ ಕುರಿತು ನಾನು ನಿನ್ನೆ ಕೇರಳದ ಮುಖ್ಯಮಂತ್ರಿ ಅವರ ಜತೆಗೆ ಮಾತನಾಡಿದ್ದೇನೆ. ಇದನ್ನು ಪ್ರತ್ಯೇಕ ಪ್ರಕರಣವೆಂದು ಪರಿಗಣಿಸಿ, ತನಿಖೆಯನ್ನು ಇಲ್ಲಿಗೇ ಮುಗಿಸಬೇಡಿ' ಎಂದು ಹೇಳಿದ್ದೇನೆ' ಎಂದರು.

             'ಈ ಘಟನೆಯ ಬಳಿಕ ಎಲ್ಲೆಡೆ ಪೋಷಕರು ಭಯಭೀತರಾಗಿದ್ದಾರೆ. ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಮತ್ತು ಪೊಲೀಸರು ಮತ್ತಷ್ಟು ಎಚ್ಚರ ವಹಿಸಬೇಕಿದೆ' ಎಂದೂ ಅನ್ವರ್ ಸಾದತ್ ಹೇಳಿದ್ದಾರೆ.


               ಅತ್ಯಾಚಾರ ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಭಾವುಕರಾದ ಶಾಸಕ ಅನ್ವರ್, 'ಮಗುವನ್ನು ಜೀವಂತವಾಗಿ ರಕ್ಷಿಸಬಹುದೆಂಬ ಆಶಾವಾದ ಹೊಂದಿದ್ದೆವು. ಈ ಪರಿಸ್ಥಿತಿಯಲ್ಲಿ ಸಿಗಬಹುದು ಎಂಬ ನಿರೀಕ್ಷೆಯೂ ಇರಲಿಲ್ಲ' ಎಂದರು.

                 ಬಿಜೆಪಿಯ ಕೇರಳ ಘಟಕದ ಅಧ್ಯಕ್ಷೆ ಕೆ. ಸುರೇಂದ್ರನ್ ಅವರು, 'ವಲಸೆ ಕಾರ್ಮಿಕರಲ್ಲಿನ ಅಪರಾಧಿ ಅಂಶಗಳನ್ನು ಗುರುತಿಸುವ ವ್ಯವಸ್ಥೆ ಆಗಬೇಕಿದೆ. ಕೆಲ ವಲಸೆ ಕಾರ್ಮಿಕರು ಮಾದಕ ದ್ರವ್ಯಗಳನ್ನು ಬಳಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಪರಿಶೀಲನಾ ವ್ಯವಸ್ಥೆ ಇಲ್ಲ. ಉತ್ತರಪ್ರದೇಶದ ರೀತಿಯ ಪೊಲೀಸ್ ಮಾದರಿಯನ್ನು ಜಾರಿತರಬೇಕೆಂದು ಜನರು ಕೇಳುತ್ತಿದ್ದಾರೆ.          ಕೇರಳದಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ' ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಮಾತನಾಡಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನರು ಬೀದಿಗಿಳಿಯಬೇಕು' ಎಂದಿದ್ದಾರೆ.

                 ಘಟನೆಯ ಬಳಿಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿರುವ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್, 'ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಪೊಲೀಸರು ಲೋಪ ಎಸಗಿದ್ದಾರೆ' ಎಂದೂ ಆರೋಪಿಸಿದೆ.

                ಆದರೆ, ಈ ಆರೋಪವನ್ನು ನಿರಾಕರಿಸಿರುವ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಅವರು, 'ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಾವುದೇ ಲೋಪಗಳಾಗಿಲ್ಲ' ಎಂದಿದ್ದಾರೆ.

'ಬಾಲಕಿಯನ್ನು ಪೋಷಕರ ಜತೆಗೆ ಒಂದುಗೂಡಿಸುವ ನಮ್ಮೆಲ್ಲ ಪ್ರಯತ್ನಗಳು ವಿಫಲವಾದವು' ಎಂದು ಕೇರಳ ಪೊಲೀಸರು ಶನಿವಾರ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿ ಕ್ಷಮೆ ಕೋರಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries