ವಾಷಿಂಗ್ಟನ್: ಜಾತ್ಯತೀತತೆಯು ಭಾರತೀಯರ ರಕ್ತದಲ್ಲಿದೆ ಎಂದಿರುವ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಲ್ಪಸಂಖ್ಯಾತರು ಅಮೆರಿಕ ಹಾಗೂ ಇತರ ದೇಶಗಳಿಗಿಂತ ಭಾರತದಲ್ಲೇ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಗ್ರೇಟರ್ ವಾಷಿಂಗ್ಟನ್ ಡಿಸಿಯಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಏಷ್ಯನ್ ಇಂಡಿಯನ್ ಅಸೋಸಿಯೇಶನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಅಲ್ಪಸಂಖ್ಯಾತರ ಸುರಕ್ಷತೆ ವಿಚಾರವಾಗಿ ಪಾಶ್ಚಾತ್ಯ ಮಾಧ್ಯಮಗಳ ಕೆಲವು ಗುಂಪುಗಳು ಸೇರಿದಂತೆ ಹಲವರಿಂದ ಭಾರತದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ' ಎಂದು ಆರೋಪಿಸಿದರು.
'ಭಾರತದಲ್ಲಿ ಏನು ನಡೆಯುತ್ತಿದೆ ಮತ್ತು ಇತರ ದೇಶಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಎಲ್ಲರೂ ಕಾಣಬಹುದು. ಆದರೆ ತಾರತಮ್ಯ ಧೋರಣೆ ಮುಂದುವರಿದಿದೆ' ಎಂದಿದ್ದಾರೆ.
'ಯಾರು ಪಾಕಿಸ್ತಾನಕ್ಕೆ ಹೋಗಲು ಬಯಸಿದ್ದರೋ ಅವರು ಈ ಹಿಂದೆಯೇ ಅಲ್ಲಿಗೆ ತೆರಳಿದ್ದಾರೆ. ಯಾರು ಭಾರತದಲ್ಲಿ ನೆಲೆಸಲು ಬಯಸಿದ್ದಾರೋ ಅವರು ಅಲ್ಲೇ ಇದ್ದಾರೆ' ಎಂದೂ ಹೇಳಿದ್ದಾರೆ.
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದಿರುವ ನಾಯ್ಡು ಅವರು, ಭಾರತದ ಆಂತರಿಕ ವಿಷಯಗಳಲ್ಲಿ ತಲೆಹಾಕದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.