ಮುಳ್ಳೇರಿಯ :ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಹೊಸತನದ ಆಕರ್ಷಣೀಯ ಕಾರ್ಯಕ್ರಮಗಳು ಬೇಕು. ಹಳ್ಳಿ ಹಳ್ಳಿಗಳಲ್ಲಿ ಚಟುವಟಿಕೆಗಳು ವಿಸ್ತರಣೆಯಾಗಬೇಕು. ಕನ್ನಡದ ಪ್ರೀತಿ ಇರುವವರೆಲ್ಲ ಕೈಜೋಡಿಸಬೇಕು. ಹೆಚ್ಚು ಹೆಚ್ಚು ಜನರ ಒಳಗೊಳ್ಳುವಿಕೆಯಿಂದ ಈ ಕನ್ನಡದ ಬೇರುಗಳು ಬಲವಾಗುತ್ತವೆ. ಕಾಸರಗೋಡು ಚಿನ್ನಾ ಅವರು ಕನ್ನಡದ ಜೀವಂತಿಕೆಗೆ ನೀಡಿದ ಕೊಡುಗೆ ಅನುಕರಣೀಯ ಎಂದು ಕವಿ, ಸಾಹಿತಿ, ಜನಪ್ರಿಯ ವೈದ್ಯ ಡಾ.ರಮಾನಂದ ಬನಾರಿ ತಿಳಿಸಿದರು.
ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಿದ ಕಾಸರಗೋಡು ಕನ್ನಡ ಹಬ್ಬದ ಅಂಗವಾಗಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸಭಾಂಗಣ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶ್ರೀ ಕ್ಷೇತ್ರ ಅಗಲ್ಪಾಡಿಯ ಆಡಳಿತ ಮಂಡಳಿಯ ವಿಶ್ವಸ್ಥ ಎ.ಜಿ. ಶರ್ಮ ದೀಪ ಬೆಳÀಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ರಂಗಚಿನ್ನಾರಿಯ ನಿರ್ದೇಶಕ, ಚಲಚ್ಚಿತ್ರ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ, ರಂಗ ಚಿನ್ನಾರಿ ಸದಸ್ಯ ಕೋಳಾರು ಸತೀಶ್‍ಶ್ಚಂದ್ರ ಭಂಡಾರಿ, ಚಂದ್ರಶೇಖರ ಏತಡ್ಕ , ಪತ್ರಕರ್ತ ಗಣೇಶ್ ಕಾಸರಗೋಡು, ರಂಗಾ ಶರ್ಮ ಉಪ್ಪಂಗಳ ಮುಂತಾದವರು ಉಪಸ್ಥಿತರಿದ್ದರು. ಬಾಲಕ ಪ್ರದ್ಯುಮ್ನ ಶರ್ಮಾ ಉಪ್ಪಂಗಳ ಪ್ರಾರ್ಥನೆ ಗೈದರು. ರಂಗಾ ಶರ್ಮಾ ಉಪ್ಪಂಗಳ ಸ್ವಾಗತಿಸಿ, ನಿರೂಪಿಸಿದರು. ಕೊಳಾರು ಸತೀಶ್ಚಂದ್ರ ಭಂಡಾರಿ ವಂದಿಸಿದರು. ಈ ಸಂದರ್ಭ ಕಾಸರಗೋಡು ಚಿನ್ನಾ ಹಾಗೂ ಡಾ.ರಮಾನಂದ ಬನಾರಿಯವರನ್ನು ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.
ಕಾಸರಗೋಡಿನ ಪ್ರಖ್ಯಾತ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಅಗಲ್ಪಾಡಿಯಲ್ಲಿ ಕಾಸರಗೋಡು ಕನ್ನಡ ಹಬ್ಬದ ಸರಣಿ ಕಾರ್ಯಕ್ರಮಗಳ ಕೊನೆಯ ಕಾರ್ಯಕ್ರಮವಾಗಿ ಮೂಡಿಬಂತು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಇವರ ಕಲಾವಿದರಿಂದ ಅಂಗದ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಡಾ.ರಮಾನಂದ ಬನಾರಿ ತಾಳಮದ್ದಳೆ ಕಾರ್ಯಕ್ರಮವನ್ನು ನಿರ್ದೇಶಸಿದ್ದರು. ಕುಮಾರಿ.ರಚನಾ ಚಿದ್ಗಲ್ ಭಾಗವತಿಕೆಯಲ್ಲಿ ಅಮೋಘವಾದ ಕಾರ್ಯಕ್ರಮವನ್ನು ನೀಡಿದರು. ಹಿಮ್ಮೇಳನದಲ್ಲಿ ಚಂಡೆ ವಾದಕರಾಗಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ಮದ್ದಳೆಯಲ್ಲಿ ಚಂದ್ರಶೇಖರ ಗುರುವಾಯನಕೆರೆ ಸಹಕರಿಸಿದರು. ಅರ್ಥದಾರಿಗಳಾಗಿ ಡಾ.ರಮಾನಂದ ಬನಾರಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವೆಂಕಟರಾಮ ಭಟ್ಟ ಸುಳ್ಯ, ರಾಮಣ್ಣ ಮಾಸ್ತರ್ ದೇಲಂಪಾಡಿ, ಎಂ.ರಮಾನಂದ ರೈ ದೇಲಂಪಾಡಿ ಸಹಕರಿಸಿದರು.