ನವದೆಹಲಿ: ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ದೇಶದಾದ್ಯಂತ ಚರ್ಚೆ ನಡೆಸುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು, ಯುಸಿಸಿ ಜಾರಿಗೆ ಇಂಗಿತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿಯು ಗಾಳಿಪಟ ಹಾರಿಸುವ ತಂತ್ರಕ್ಕೆ ಜೋತುಬಿದ್ದಿದೆ. ಆದರೆ, ನಾಗರಿಕ ಸಂಹಿತೆಯ ಪ್ರಸ್ತಾವಕ್ಕೆ ಇನ್ನೂ ಸ್ಪಷ್ಟವಾದ ಮೂರ್ತರೂಪವೇ ಸಿಕ್ಕಿಲ್ಲ. ಜನರನ್ನು ದಿಕ್ಕುತಪ್ಪಿಸಲು ಅವರತ್ತ 'ಗೂಗ್ಲಿ ಎಸೆತ'ಕ್ಕೆ ಮುಂದಾಗಿದೆ' ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವ್ಯಂಗ್ಯವಾಡಿದ್ದಾರೆ.
ಸಂಹಿತೆಯ ಜಾರಿ ಸಂಬಂಧ ಸಂಸದೀಯ ಸ್ಥಾಯಿ ಸಮಿತಿ ಅಥವಾ ಸಂಸತ್‌ನಲ್ಲಿ ಇನ್ನೂ ಸ್ಪಷ್ಟ ನಿರ್ಧಾರವನ್ನೇ ಕೈಗೊಂಡಿಲ್ಲ. ಈ ವಿಷಯವನ್ನು ತನ್ನ ರಾಜಕೀಯ ಲಾಭಕ್ಕಾಗಿ ದಾಳವಾಗಿಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಯುಸಿಸಿ ಬಗೆಗಿನ ವ್ಯಾಖ್ಯಾನ ಇನ್ನೂ ಸ್ಪಷ್ಟಗೊಂಡಿಲ್ಲ. ಅದರ ಕಾರ್ಯಸೂಚಿ ಏನು, ಮಸೂದೆ ಎಲ್ಲಿದೆ ಎಂಬುದೇ ತಿಳಿದಿಲ್ಲ. ಇದು ಗಾಳಿಪಟ ಹಾರಿಸುವ ಕೆಲಸವಲ್ಲದೆ ಮತ್ತೇನೂ ಇಲ್ಲ. ಸಂಸತ್‌ನಲ್ಲಿಯೂ ಇನ್ನು ಕಾರ್ಯಸೂಚಿ ಮಂಡನೆಯಾಗಿಲ್ಲ ಎಂದಿದ್ದಾರೆ.
ದೃಶ್ಯ ಮಾಧ್ಯಮಗಳು ಅಥವಾ ಬೇರೆ ಸ್ಥಳಗಳಲ್ಲಿ ನಾಗರಿಕ ಸಂಹಿತೆ ಕುರಿತ ಚರ್ಚೆಗೆ ಪ್ರಚೋದಿಸಿದರೆ ಪ್ರತಿ ಕೆ.ಜಿಗೆ ₹ 100 ಮುಟ್ಟಿರುವ ಟೊಮೆಟೊ ಧಾರಣೆ ಬಗ್ಗೆ ಮಾತನಾಡುವುದನ್ನೇ ಮರೆತುಬಿಡುತ್ತಾರೆ. ನಿರುದ್ಯೋಗ, ಹಣದುಬ್ಬರದಿಂದ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಆದರೆ, ಈ ಬಗೆಗಿನ ಚರ್ಚೆಗಳಿಂದ ಜನರನ್ನು ವಿಮುಖಗೊಳಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.
'ಮಣಿಪುರ ಸಂಘರ್ಷ ತೀವ್ರ ಹುಣ್ಣಾಗಿ ಬಾಧಿಸುತ್ತಿದೆ. ಆದರೆ, ಅದಕ್ಕೆ ಚಿಕಿತ್ಸೆ ನೀಡುವಲ್ಲಿ ಬಿಜೆಪಿ ಸೋತಿದೆ. ಸರ್ವಪಕ್ಷಗಳ ಸಭೆ ಕರೆಯುವಲ್ಲಿ ಮೋದಿಯೂ ವಿಫಲರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಎನ್. ಬಿರೆನ್ ಸಿಂಗ್ ಅವರಿಗೆ ಯಾವುದೇ ನೈತಿಕ ಹಾಗೂ ರಾಜಕೀಯ ಹಕ್ಕಿಲ್ಲ' ಎಂದು ಟೀಕಿಸಿದ್ದಾರೆ.
22ನೇ ಕಾನೂನು ಆಯೋಗವು ಯುಸಿಸಿ ಕುರಿತು ನಾಗರಿಕರು ಮತ್ತು ಮಾನ್ಯತೆ ಪಡೆದಿರುವ ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿದೆ. ಕಳೆದ ತಿಂಗಳು ಮಧ್ರಪ್ರದೇಶದ ಭೋಪಾಲ್‌ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಪ್ರಧಾನಿ ಮೋದಿ ಇಂಗಿತ ವ್ಯಕ್ತಪಡಿಸಿದ್ದರು.
ಪಕ್ಷವು ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ಕಾನೂನು ಆಯೋಗವು ಸದ್ಯದ ತನ್ನ ನಿಲುವು ಬದಲಾಯಿಸಿಕೊಂಡು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳಿಂದ ಹೊಸದಾಗಿ ಅಭಿಪ್ರಾಯಗಳನ್ನು ಆಹ್ವಾನಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.