ಮಂಜೇಶ್ವರ: ರಾಜ್ಯದಲ್ಲಿ ಪ್ಲಸ್ ಒನ್ ಗೆ ಅರ್ಹತೆ ಪಡೆದ ಒಬ್ಬ ವಿದ್ಯಾರ್ಥಿಯೂ ಸೀಟು ಲಭಿಸದಿರುವ ಆತಂಕ ಎದುರಿಸಬೇಕಿಲ್ಲ. ಅರ್ಹ ಎಲ್ಲರಿಗೂ ಕಲಿಕೆಗೆ ಅವಕಾಶ ಲಭಿಸಲಿದೆ ಎಂದು ರಾಜ್ಯ ಸಹಕಾರ ನೋಂದಣಿ ಇಲಾಖೆ ಸಚಿವ ವಿ.ಎನ್.ವಾಸವನ್ ತಿಳಿಸಿದರು.
ಕಾಸರಗೋಡು ಅಭಿವೃದ್ದಿ ಪ್ಯಾಕೇಜ್‍ನ ಅನುದಾನದಲ್ಲಿ ನಿರ್ಮಿಸಲಾದ ಜಿವಿಎಚ್‍ಎಸ್‍ಎಸ್ ಕುಂಜತ್ತೂರು ಶಾಲಾ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕೋವಿಡ್ ಸಮಯದಲ್ಲಿ ಆನ್‍ಲೈನ್ ಮೂಲಕ ತರಗತಿಗಳನ್ನು ಯಶಸ್ವಿಯಾಗಿ ನಡೆಸಿದ ದೇಶದ ಏಕೈಕ ರಾಜ್ಯ ಕೇರಳವಾಗಿದೆ. ಈ ಸರ್ಕಾರ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಮನರಂಜನೆಯ ಮೂಲಕ ಜ್ಞಾನದ ಲೋಕಕ್ಕೆ ಕರೆದೊಯ್ಯುತ್ತಿದೆ. ಮರ ಬಿದ್ದು ಅಪಘಾತದಲ್ಲಿ ಮೃತಪಟ್ಟ ಅಂಗಡಿಮೊಗರು ಶಾಲಾ ವಿದ್ಯಾರ್ಥಿ ಆಯೆಷತ್ ಮಿನ್ಹಾ ಅವರ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು ಎಂದು ಸಚಿವರು ತಿಳಿಸಿದರು. ಭರವಸೆ ನೀಡಿದ್ದನ್ನು ಜಾರಿಗೆ ತರುವಲ್ಲಿ ಸರ್ಕಾರ ಉತ್ಸುಕವಾಗಿದೆ ಎಂದುರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ವಿಎಚ್‍ಎಸ್‍ಇಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಕುಂಜತ್ತೂರು ಜಿವಿಎಚ್‍ಎಸ್‍ಎಸ್ ಶಾಲಾ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳನ್ನು ಸಚಿವರು ಅಭಿನಂದಿಸಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಕಮಲಾಕ್ಷಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕಿ ಇ.ಆರ್.ಉದಯಕುಮಾರಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಶಾಫಾ ಫಾರೂಕ್, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಮಂಜೇಶ್ವರ ಎ.ಇ.ಓ.ವಿ.ದಿನೇಶ್, ವಿದ್ಯಾಭ್ಯಾಸ ಕ್ಷೇತ್ರ ನಿರೂಪಣಾಧಿಕಾರಿ ವಿಜಯಕುಮಾರ್, ಪಿಟಿಎ ಅಧ್ಯಕ್ಷೆ ಮೋಹಿನಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಅಶ್ರಫ್ ಕುಂಜತ್ತೂರು, ದಯಾಕರ ಮಾಡ, ಒಎಸ್‍ಎ ಅಧ್ಯಕ್ಷ ಅಬ್ದುಲ್ ರಹ್ಮಾನ್ ಉದ್ಯಾವರ, ಎಸ್‍ಎಂಸಿ ಸದಸ್ಯ ಯು.ಎಚ್.ಅಬ್ದುಲ್ ರಹಮಾನ್, ಎಸ್.ಆರ್.ಆರ್. ಸಹಾಯಕಿ ಬಿ.ಅಮಿತಾ ುಪಸ್ಥಿತರಿದ್ದರು. ಶಾಲಾ ಸಂಚಾಲಕ ಕೆ.ಶಿಶುಪಾಲನ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಜಿ.ಬಾಲಕೃಷ್ಣನ್ ವಂದಿಸಿದರು.